ನೀವು ತಮಗೆ ಪ್ರಿಯವಾದ ವಸ್ತುಗಳಿಂದ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರೆಗೆ ನಿಮಗೆ ಪುಣ್ಯದ ಉನ್ನತ ದರ್ಜೆಗೆ ತಲುಪಲು ಸಾಧ್ಯವೇ ಇಲ್ಲಾ. ನೀವು ಏನನ್ನು ಖರ್ಚು ಮಾಡುವುದಾಗಿದ್ದರೂ ಖಂಡಿತವಾಗಿಯು ಅಲ್ಲಾಹನು ಅದರ ಕುರಿತು ಚೆನ್ನಾಗಿ ಅರಿಯುವವನಾಗಿದ್ದಾನೆ.
ತೌರಾತ್ ಅವತೀರ್ಣವಾಗುವುದಕ್ಕೆ ಮೊದಲು (ಪೈಗಂಬರ್) (ಯಾಕೂಬ್) ತಮ್ಮ ಮೇಲೆ ಯಾವುದನ್ನು ನಿಷಿದ್ಧಗೊಳಿಸಿದ್ದ ವಸ್ತುಗಳ ಹೊರತು (ಮುಸ್ಲಿಮರಿಗೆ ಧರ್ಮ ಬದ್ಧವಾಗಿರುವ) ಎಲ್ಲಾ ಆಹಾರ ಪದಾರ್ಥಗಳೂ ಇಸ್ರಾಯೀಲ್ ಸಂತತಿಗಳಿಗೂ ಧರ್ಮಸಮ್ಮತವಾಗಿದ್ದವು. ಓ ಪೈಗಂಬರರೇ ಹೇಳಿರಿ: ನೀವು ಸತ್ಯಸಂಧರಾಗಿದ್ದರೆ ತೌರಾತನ್ನು ತಂದು ಅದರ ಪಾರಾಯಣ ಮಾಡಿರಿ.
(ಪೈಗಂಬರರೇ) ಹೇಳಿರಿ: ಅಲ್ಲಾಹನು ಸತ್ಯವನ್ನು ಹೇಳಿದ್ದಾನೆ. ಮಿಥ್ಯವನ್ನು ತ್ಯಜಿಸಿ ಸತ್ಯವನ್ನು ಅನುಸರಿಸಿದ ಇಬ್ರಾಹೀಮ್(ಅ)ರ ಮಾರ್ಗವನ್ನು ಅನುಸರಿಸಿರಿ. ಅವರು ಬಹುದೇವಾರಾಧಕರಲ್ಲಿ ಸೇರಿರಲಿಲ್ಲ.
ಅದರಲ್ಲಿ ಸ್ಪಷ್ಟ ದೃಷ್ಟಾಂತಗಳಿವೆ. ಇಬ್ರಾಹೀಮ್(ಅ)ರವರು ನಿಂತಿದ್ದ ಸ್ಥಳವಿದೆ. ಯಾರು ಅಲ್ಲಿಗೆ ಪ್ರವೇಶಿಸುತ್ತಾನೋ ಅವನು ನಿರ್ಭಯನಾಗುವನು. ಅಲ್ಲಾಹನು ಅದರೆಡೆಗೆ ತಲುಪಲು ಸಾಧ್ಯವಿರುವ ಜನರ ಮೇಲೆ ಆ ಭವನದ ಹಜ್ಜ್ಯಾತ್ರೆ ನಡೆಸುವುದನ್ನು ಕಡ್ಡಾಯಗೊಳಿಸಿದ್ದಾನೆ. ಇನ್ನು ಯಾರಾದರೂ (ಈ ಆದೇಶವನ್ನು) ನಿರಾಕರಿಸಿದರೆ ಅಲ್ಲಾಹನು ಸರ್ವಲೋಕದವರಿಂದ ನಿರಪೇಕ್ಷನಾಗಿದ್ದಾನೆ.
ಹೇಳಿರಿ: ಓ ಗ್ರಂಥದವರೇ, ವಿಶ್ವಾಸಿಗಳನ್ನು (ಅಲ್ಲಾಹನ ಮೇಲೆ ವಿಶ್ವಾಸವಿರಿಸಿದವನು) ಅಲ್ಲಾಹನ ಮಾರ್ಗದಿಂದ ನೀವೇಕೆ ತಡೆಯುತ್ತಿರುವಿರಿ. ಮತ್ತು ಅಡ್ಡದಾರಿಯಲ್ಲಿ ನಡೆಯಬೇಕೆಂದು ಬಯಸುತ್ತೀರಿ. ವಸ್ತುತಃ (ಅವನು ನೇರ ಮಾರ್ಗದಲ್ಲಿರುವ ಬಗ್ಗೆ) ನೀವೇ ಸಾಕ್ಷಿಗಳಾಗಿರುವಿರಿ. ಅಲ್ಲಾಹನು ನಿಮ್ಮ ಕರ್ಮಗಳ ಬಗ್ಗೆ ಅಲಕ್ಷö್ಯನಲ್ಲ.
ಓ ಸತ್ಯವಿಶ್ವಾಸಿಗಳೇ, ಗ್ರಂಥ ನೀಡಲ್ಪಟ್ಟವರ ಯಾವುದೇ ಒಂದು ಗುಂಪನ್ನು ನೀವು ಅನುಸರಿಸುವುದಾದರೆ ಅವರು ನಿಮ್ಮನ್ನು ನೀವು ವಿಶ್ವಾಸ ಸ್ವೀಕರಿಸಿದ ನಂತರ ನಿಷೇಧಿಗಳನ್ನಾಗಿ ಮಾರ್ಪಡಿಸುವರು.