ಆಕೆ ಹೇಳಿದಳು: 'ನನ್ನ ಪ್ರಭುವೇ, ನನಗೆ ಮಗುವಾಗುವುದಾದರೂ ಹೇಗೆ? ವಸ್ತುತಃ ನನ್ನನ್ನು ಯಾವ ಮನುಷ್ಯನೂ ಸ್ಪರ್ಶಿಸಿಲ್ಲ. ಅಲ್ಲಾಹನು ಹೇಳಿದನು: 'ಇದೇ ಪ್ರಕಾರ ಅಲ್ಲಾಹನು ತಾನಿಚ್ಛಿಸಿದ್ದನ್ನು ಸೃಷ್ಟಿಸುತ್ತಾನೆ. ಅವನು ಯಾವುದೇ ಕಾರ್ಯ ಮಾಡಲು ನಿರ್ಧರಿಸಿದಾಗ ಅದಕ್ಕೆ 'ಆಗು' ಎಂದು ಮಾತ್ರ ಹೇಳುತ್ತಾನೆ. ಆಗ ಅದು ಆಗಿ ಬಿಡುತ್ತದೆ'.
ಮತ್ತು ಅವರನ್ನು ಇಸ್ರಾಯೀಲ್ ಸಂತತಿಯೆಡೆಗೆ ಸಂದೇಶವಾಹಕರನ್ನಾಗಿ ನೇಮಿಸುವನು (ಅವರು ಹೇಳುವರು:) 'ನಾನು ನಿಮ್ಮ ಬಳಿ ನಿಮ್ಮ ಪ್ರಭುವಿನ ಕಡೆಯಿಂದ ದೃಷ್ಟಾಂತವನ್ನು ತಂದಿರುವೆನು. ನಾನು ನಿಮಗಾಗಿ ಆವೆ ಮಣ್ಣಿನ ಪಕ್ಷಿಯ ಆಕೃತಿಯಂತೆ ಮಾಡಿ, ನಾನದರಲ್ಲಿ ಊದಿದಾಗ ಅದು ಅಲ್ಲಾಹನ ಅಪ್ಪಣೆಯಿಂದ ಪಕ್ಷಿಯಾಗಿಬಿಡುವುದು ಮತ್ತು ಅಲ್ಲಾಹನ ಅಪ್ಪಣೆಯಿಂದ ನಾನು ಹುಟ್ಟು ಕುರುಡನನ್ನೂ, ಕುಷ್ಠರೋಗಿಯನ್ನೂ ಗುಣಪಡಿಸುವೆನು ಮತು ಮೃತರನ್ನು ಜೀವಂತಗೊಳಿಸುವೆನು. ನೀವು ತಿನ್ನುವುದನ್ನು ಮತ್ತು ನಿಮ್ಮ ಮನೆಗಳಲ್ಲಿ ಸಂಗ್ರಹಿಸಿಡುವುದನ್ನು ನಿಮಗೆ ತಿಳಿಸಿಕೊಡುವೆನು. ನೀವು ವಿಶ್ವಾಸವಿರಿಸುವವರಾಗಿದ್ದರೆ ನಿಸ್ಸಂಶಯವಾಗಿಯು ಇದರಲ್ಲಿ ನಿಮಗೆ ದೃಷ್ಟಾಂತವಿದೆ.
ಮತ್ತು ನಾನು ನನ್ನ ಮುಂಚಿನ ಗ್ರಂಥವಾದ ತೌರಾತನ್ನು ಸತ್ಯವೆಂದು ದೃಢೀಕರಿಸಲು ಮತ್ತು ನಿಮ್ಮ ಮೇಲೆ ನಿಷಿದ್ಧಗೊಳಿಸಿರುವುದರಲ್ಲಿ ಕೆಲವನ್ನು ನಿಮಗೆ ಧರ್ಮ ಸಮ್ಮತಗೊಳಿಸಲೆಂದು ಬಂದಿರುವೆನು. ನಾನು ನಿಮಗೆ ನಿಮ್ಮ ಪ್ರಭುವಿನ ಕಡೆಯಿಂದ ದೃಷ್ಟಾಂತವನ್ನು ತಂದಿರುವೆನು. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
ಆದರೆ ಈಸಾ(ಅ)ರವರು ಅವರ ನಿಷೇಧವನ್ನು ಮನದಟ್ಟು ಮಾಡಿಕೊಂಡಾಗ, 'ಅಲ್ಲಾಹನ ಮಾರ್ಗದಲ್ಲಿ ನನ್ನ ಸಹಾಯಕರಾಗಿ ಯಾರಿದ್ದಾರೆ ಎಂದು ಕೇಳಿದರು.? ‘ನಾವು ಅಲ್ಲಾಹನ ಮಾರ್ಗದಲ್ಲಿ ಸಹಾಯಕರಾಗಿದ್ದೇವೆ ಎಂದು ಅನುಯಾಯಿಗಳು ಹೇಳಿದರು. ನಾವು ಅಲ್ಲಾಹನ ಮೇಲೆ ವಿಶ್ವಾಸವಿಟ್ಟಿದ್ದೇವೆ ಮತ್ತು ನಾವು ವಿಧೇಯರಾಗಿದ್ದೇವೆಂಬುದಕ್ಕೆ ನೀವು ಸಾಕ್ಷö್ಯವಹಿಸಿರಿ'.