ಅವರು (ಧರ್ಮನಿಷ್ಠರು): 'ಓ ನಮ್ಮ ಪ್ರಭು, ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ರಕ್ಷಿಸು' ಎಂದು ಪ್ರಾರ್ಥಿಸುತ್ತಾರೆ.
ಅವರು ಸಹನೆ ವಹಿಸುವವರು, ಸತ್ಯವನ್ನು ನುಡಿಯುವವರು, ಅನುಸರಣೆಯುಳ್ಳವರು, ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರು ಮತ್ತು ರಾತ್ರಿಯ ಕೊನೆಗಳಿಗೆಯಲ್ಲಿ ಪಾಪವಿಮೋಚನೆಗಾಗಿ ಪ್ರಾರ್ಥಿಸುತ್ತಿರುತ್ತಾರೆ.
ಅಲ್ಲಾಹನು ತನ್ನ ಹೊರತು ಇತರ ಆರಾಧ್ಯರಿಲ್ಲವೆಂದು ಸ್ವತಃ ಸಾಕ್ಷö್ಯ ನುಡಿಯುತ್ತಾನೆ. (ಅದೇ ರೀತಿ) ಮಲಕ್‌ಗಳು (ದೂತರು) ಜ್ಞಾನವುಳ್ಳವರು ಸಹ ಸತ್ಯ ಹಾಗೂ ನ್ಯಾಯೋಚಿತವಾಗಿ ಪ್ರತಾಪಶಾಲಿಯೂ, ಯುಕ್ತಿಪೂರ್ಣನೂ ಆದ ಅಲ್ಲಾಹನ ಹೊರತು ಅನ್ಯ ಆರಾಧ್ಯನಿಲ್ಲವೆಂದು ಸಾಕ್ಷಿ ವಹಿಸುತ್ತಾರೆ.
ಖಂಡಿತವಾಗಿಯು ಅಲ್ಲಾಹನ ಬಳಿ ಪ್ರತಿಫಲವು ಆಜ್ಞಾನುಸರಣೆಯಲ್ಲಿ ಮಾತ್ರವಿದೆ. ಗ್ರಂಥದವರು ತಮಗೆ ಜ್ಞಾನ ಬಂದ ನಂತರ ತಮ್ಮೊಳಗಿನ ಅಸೂಯೆಯ ನಿಮಿತ್ತ ಭಿನ್ನತೆ ತೋರಿದ್ದರು ಮತ್ತು ಯಾರು ಅಲ್ಲಾಹನ ಸೂಕ್ತಿಗಳನ್ನು ನಿಷೇಧಿಸುತ್ತಾರೋ ಅವರ ವಿಚಾರಣೆ ಮಾಡುವುದರಲ್ಲಿ ಅಲ್ಲಾಹನು ಅತೀ ಶೀಘ್ರನು.
ಅನಂತರ ಅವರು ನಿಮ್ಮೊಂದಿಗೆ ತರ್ಕಿಸುವುದಾದರೆ 'ನಾನು ಮತ್ತು ನನ್ನ ಅನುಯಾಯಿಗಳು ಅಲ್ಲಾಹನಿಗೆ ಶರಣಾಗಿದ್ದೇವೆ' ಎಂದು ಹೇಳಿರಿ. ಗ್ರಂಥ ನೀಡಲಾದವರೊಂದಿಗೆ ಮತ್ತು ನಿರಕ್ಷರಿಗಳೊಂದಿಗೆ (ಬಹುದೇವಾರಾಧಕರು) 'ನೀವೂ ವಿಧೇಯರಾಗಿದ್ದೀರಾ'? ಎಂದು ಕೇಳಿರಿ ಅವರು ವಿಧೇಯರಾದರೆ ಖಂಡಿತ ಅವರು ಸನ್ಮಾರ್ಗವನ್ನು ಪಡೆದರು. ಇನ್ನು ಅವರು ವಿಮುಖರಾಗಿಬಿಟ್ಟರೆ ನಿಮ್ಮ ಮೇಲೆ ಸಂದೇಶ ತಲುಪಿಸುವ ಹೊಣೆಗಾರಿಕೆ ಮಾತ್ರವಿದೆ ಮತ್ತು ಅಲ್ಲಾಹನು ದಾಸರನ್ನು ಚೆನ್ನಾಗಿ ವೀಕ್ಷಿಸುವವನಾಗಿದ್ದಾನೆ.
ಓ ಪೈಗಂಬರರೇ, ಯಾರು ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುತ್ತಾರೋ, ಯಾರು ಅನ್ಯಾಯವಾಗಿ ಪ್ರವಾದಿಗಳನ್ನು ವಧಿಸುತ್ತಾರೊ ಮತ್ತು ನ್ಯಾಯ ಪಾಲನೆಯ ಆದೇಶ ನೀಡುವವರನ್ನು ವಧಿಸುತ್ತಾರೊ ಅವರಿಗೆ ವೇದನಾಜನಕ ಶಿಕ್ಷೆಯ ಶುಭವಾರ್ತೆ ತಿಳಿಸಿರಿ.