ಹೇಳಿರಿ: ಅಲ್ಲಾಹನಲ್ಲೂ, ನಮ್ಮ ಮೇಲೆ ಅವತೀರ್ಣಗೊಳಿಸಲಾಗಿರುವುದರಲ್ಲೂ ಮತ್ತು ಇಬ್ರಾಹೀಮ್ ಇಸ್ಮಾಯೀಲ್, ಇಸ್‌ಹಾಕ್, ಯಾಕೂಬ್ ಮತ್ತು ಅವರ ಸಂತತಿಗಳಿಗೆ ಅವತೀರ್ಣಗೊಳಿಸಲಾಗಿರುವುದರಲ್ಲೂ, ಮೂಸಾ, ಈಸಾರಿಗೆ ಹಾಗೂ ಸಕಲ ಪೈಗಂಬರರಿಗೆ ತಮ್ಮ ಪ್ರಭುವಿನ ವತಿಯಿಂದ ನೀಡಲಾಗಿರುವುದರಲ್ಲೂ ನಾವು ವಿಶ್ವಾಸವಿಟ್ಟಿರುವೆವು. ಅವರ ಪೈಕಿ ಯಾರ ನಡುವೆಯೂ ನಾವು ತಾರತಮ್ಯ ಮಾಡುವುದಿಲ್ಲ. ನಾವು ಅಲ್ಲಾಹನಿಗೆ ವಿಧೇಯರಾಗಿದ್ದೇವೆ.
ವಿಶ್ವಾಸವಿಟ್ಟು ಸಂದೇಶವಾಹಕನ ಸತ್ಯಸಂಧ್ಯತೆಗೆ ಸಾಕ್ಷö್ಯವಹಿಸಿದ ಬಳಿಕ ಮತ್ತು ತಮ್ಮ ಬಳಿ ಸ್ಪಷ್ಟ ಪುರಾವೆಗಳು ಬಂದ ಬಳಿಕ ಅವಿಶ್ವಾಸಿಗಳಾದ ಜನರಿಗೆ ಅಲ್ಲಾಹನು ಸನ್ಮಾರ್ಗ ತೋರಿಸುವುದಾದರೂ ಹೇಗೆ? ಅಲ್ಲಾಹನು ಇಂತಹ ಅಕ್ರಮಿ ಜನರನ್ನು ಸನ್ಮಾರ್ಗದಲ್ಲಿ ಮುನ್ನಡೆಸುವುದಿಲ್ಲ.
ನಿಸ್ಸಂಶಯವಾಗಿಯು ಯಾರು ವಿಶ್ವಾಸವಿಟ್ಟ ಬಳಿಕ ಸತ್ಯನಿಷೇಧಿಸುತ್ತಾರೋ ಅನಂತರ ನಿಷೇಧದಲ್ಲಿ ಇನ್ನಷ್ಟು ಮುಂದುವರಿಯುತ್ತಾರೋ ಅವರ ಪಶ್ಚಾತ್ತಾಪವನ್ನು ಎಂದಿಗೂ ಸ್ವೀಕರಿಸಲಾಗದು. ಅವರೇ ಮಾರ್ಗ ಭ್ರಷ್ಟರಾಗಿದ್ದಾರೆ.
ಆದರೆ ಸತ್ಯನಿಷೇಧ ಕೈಗೊಂಡು ಸತ್ಯನಿಷೇಧದಲ್ಲೇ ಮರಣ ಹೊಂದುವವರ ಪೈಕಿ ಯಾರು ಭೂಮಿಯಷ್ಟು ಚಿನ್ನವನ್ನು ಪ್ರಾಯಶ್ಚಿತವಾಗಿ, ತಮ್ಮ ಮೋಕ್ಷಕ್ಕಾಗಿ ನೀಡಿದರೂ, ಅದು ಎಂದಿಗೂ ಸ್ವೀಕರಿಸಲ್ಪಡಲಾರದು. ಅವರಿಗೆ ಯಾತನಾಮಯ ಶಿಕ್ಷೆಯಿರುವುದು ಮತ್ತು ಅವರಿಗೆ ಅಲ್ಲಾಹನೆದುರು ಯಾವ ಸಹಾಯಕರೂ ಇರಲಾರರು.