ಮತ್ತು ಗ್ರಂಥ ನೀಡಲಾದವರೊಂದಿಗೆ: ನೀವದನ್ನು ಎಲ್ಲ ಜನರಿಗೆ ವಿವರಿಸಿಕೊಡಬೇಕು, ಮತ್ತು ಅದನ್ನು ಬಚ್ಚಿಡಬಾರದೆಂದು ಅಲ್ಲಾಹನು ಕರಾರು ಪಡೆದುಕೊಂಡ ಸಂಧರ್ಭವನ್ನು ಸ್ಮರಿಸಿರಿ. ಅದಾಗ್ಯೂ ಅವರು ಆ ಕರಾರನ್ನು ತಮ್ಮ ಬೆನ್ನ ಹಿಂದೆ ಎಸೆದರು ಮತ್ತು ಅದನ್ನು ತುಚ್ಛ ಬೆಲೆಗೆ ಮಾರಿಬಿಟ್ಟರು. ಅವರ ಈ ಕ್ರಯವಿಕ್ರಯವು ಅದೆಷ್ಟು ನಿಕೃಷ್ಟವಾಗಿದೆ.
ಅವರು ತಮ್ಮ ಕೃತ್ಯಗಳ ಮೇಲೆ ಸಂತುಷ್ಟರಾಗಿದ್ದಾರೆ ಮತ್ತು ತಾವು ಮಾಡದಿರುವ ಸಂಗತಿಗಳ ಕುರಿತು ಪ್ರಶಂಸೆ ಗಿಟ್ಟಿಸಲು ಬಯಸುತ್ತಾರೆ. ಅವರು ಶಿಕ್ಷೆಯಿಂದ ಪಾರಾಗುವವರೆಂದು ನೀವು ಖಂಡಿತ ಭಾವಿಸಬೇಡಿರಿ. ಅವರಿಗೆ ವೇದನಾಜನಕ ಶಿಕ್ಷೆಯಿರುವುದು.
ಅವರು ನಿಂತುಕೊAಡೂ, ಕುಳಿತುಕೊಂಡೂ ಮತ್ತು ತಮ್ಮ ಪಾರ್ಶ್ವದಲ್ಲಿ ಮಲಗಿಕೊಂಡೂ ಅಲ್ಲಾಹನನ್ನು ಸ್ಮರಿಸುತ್ತಾರೆ.ಮತ್ತು ಭೂಮಿ ಆಕಾಶಗಳ ಸೃಷ್ಟಿಯ ಕುರಿತು ಚಿಂತನೆ ಮಾಡುತ್ತಾರೆ ಮತ್ತು ಹೇಳುತ್ತಾರೆ: ಓ ನಮ್ಮ ಪ್ರಭೂ, ಇದನ್ನು ನೀನು ವ್ಯರ್ಥವಾಗಿ ಸೃಷ್ಟಿಸಿಲ್ಲ. ನೀನು ಪರಮಪಾವನನು ಆದ್ದರಿಂದ ನೀನು ನಮ್ಮನ್ನು ನರಕ ಶಿಕ್ಷೆಯಿಂದ ಕಾಪಾಡು.(ಎಂದು ಪ್ರಾರ್ಥಿಸುತ್ತಾರೆ)
ನಮ್ಮ ಪ್ರಭೂ, ಓರ್ವ ಕರೆ ನೀಡುವಾತನು: 'ನೀವು ನಿಮ್ಮ ಪ್ರಭುವಿನಲ್ಲಿ ವಿಶ್ವಾಸವಿಡಿರಿ' ಎಂದು ಹೇಳುತ್ತಾ ಸತ್ಯವಿಶ್ವಾಸದೆಡೆಗೆ ಕರೆಯುವುದನ್ನು ನಾವು ಆಲಿಸಿದೆವು. ಆಗ ನಾವು ವಿಶ್ವಾಸವಿಟ್ಟೆವು. ಆದುದರಿಂದ ನಮ್ಮ ಪ್ರಭು, ನಮ್ಮ ಪಾಪಗಳನ್ನು ಕ್ಷಮಿಸಿಬಿಡು ಮತ್ತು ನಮ್ಮ ಕೆಡುಕುಗಳನ್ನು ನಮ್ಮಿಂದ ದೂರ ಮಾಡು ಮತ್ತು ಸಜ್ಜನರ ಜೊತೆ ನಮಗೆ ಮರಣವನ್ನು ಕೊಡು.
ನಮ್ಮ ಪ್ರಭು, ನೀನು ನಿನ್ನ ಸಂದೇಶವಾಹಕರ ಮೂಲಕ ನಮ್ಮೊಂದಿಗೆ ವಾಗ್ದಾನ ಮಾಡಿರುವುದನ್ನು ನಮಗೆ ದಯಪಾಲಿಸು ಮತ್ತು ನಮ್ಮನ್ನು ಪುನರುತ್ಥಾನ ದಿನದಂದು ಅಪಮಾನಿಸದಿರು. ಖಂಡಿತವಾಗಿಯು ನೀನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.