ಅವರು ಅನುಕೂಲ ಸ್ಥಿತಿಯಲ್ಲೂ, ದುಸ್ಥಿತಿಯಲ್ಲೂ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರು ಕೋಪವನ್ನು ನುಂಗಿಕೊಳ್ಳುವವರು ಮತ್ತು ಜನರನ್ನು ಮನ್ನಿಸುವವರಾಗಿದ್ದಾರೆ. ಅಲ್ಲಾಹನು ಆ ಸತ್ಕರ್ಮಿಗಳನ್ನು ಪ್ರೀತಿಸುತ್ತಾನೆ.
ಅವರು ಏನಾದರೂ ನೀಚಕೃತ್ಯವೆಸಗಿದರೆ ಅಥವಾ ಅವರು ಯಾವುದಾದರೂ ಪಾಪ ಮಾಡಿದರೆ ಕೂಡಲೇ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆ ಬೇಡುತ್ತಾರೆ. ವಾಸ್ತವದಲ್ಲಿ ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವರು ಇನ್ನಾರಿದ್ದಾರೆ? ಮತ್ತು ಅವರು ತಿಳಿದೂ ಯಾವುದೇ ಕೆಡುಕಿನಲ್ಲಿ ಪಟ್ಟುಹಿಡಿಯಲಾರರು.
ಅಂಥಹವರಿಗೆ ಇರುವ ಪ್ರತಿಫಲವು ತಮ್ಮ ಪ್ರಭುವಿನ ಕಡೆಯಿಂದಿರುವ ಪಾಪವಿಮೋಚನೆ ಮತ್ತು ತಳಭಾಗದಲ್ಲಿ ಕಾಲುವೆಗಳು ಹರಿಯುತ್ತಿರುವ ಸ್ವರ್ಗೋದ್ಯಾನಗಳಾಗಿವೆ. ಅಲ್ಲಿ ಅವರು ಶಾಶ್ವತವಾಗಿರುವರು. ಆ ಸತ್ಕರ್ಮ ಮಾಡುವವರ ಪ್ರತಿಫಲವು ಅದೆಷ್ಟು ಉತ್ತಮವಾಗಿದೆ!
ನಿಮಗೆ ಗಾಯಗಳಾಗಿದ್ದರೆ ನಿಮ್ಮ ಎದುರಾಳಿಗಳೂ ಸಹ ಇದೇ ರೀತಿಯ ಗಾಯಗಳಾಗಿದ್ದವು. ನಾವು ಈ ದಿನಗಳನ್ನು ಜನರ ನಡುವೆ ಬದಲಾಯಿಸುತ್ತಿರುತ್ತೇವೆ. ಇದು (ಉಹುದ್‌ನ ಪರಾಜಯವು) ಅಲ್ಲಾಹನು ಸತ್ಯವಿಶ್ವಾಸಿಗಳನ್ನು ಅರಿಯಲಿಕ್ಕೂ, ನಿಮ್ಮಲ್ಲಿ ಕೆಲವರನ್ನು ಹುತಾತ್ಮರನ್ನಾಗಿ ಮಾಡಲಿಕ್ಕು ಆಗಿತ್ತು. ಅಲ್ಲಾಹನು ಅಕ್ರಮಿಗಳನ್ನು ಪ್ರೀತಿಸುವುದಿಲ್ಲ.