ಪ್ರತಿಯೊಬ್ಬ ವ್ಯಕ್ತಿಯು ತಾನು ಮಾಡಿದ ಒಳಿತು ಮತ್ತು ಕೆಡುಕನ್ನು ತನ್ನ ಮುಂದೆ ಪ್ರತ್ಯಕ್ಷವಾಗಿ ಕಾಣಲಿರುವನು. ಆಗ ಅವನು ಆ ದಿನ ಮತ್ತು ಅವನ ದುಷ್ಕರ್ಮಗಳ ನಡುವೆ ಬಹಳಷ್ಟು ಅಂತರವಿರುತ್ತಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತೆಂದು ಆಶಿಸುವನು. ಅಲ್ಲಾಹನು ತನ್ನ ಆಕ್ರೋಶದ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಾನೆ ಮತ್ತು ಅಲ್ಲಾಹನು ತನ್ನ ದಾಸರ ಮೇಲೆ ಅಪಾರ ದಯೆಯುಳ್ಳವನಾಗಿದ್ದಾನೆ.
ಓ ಪೈಗಂಬರರೇ ಹೇಳಿರಿ: ವಾಸ್ತವದಲ್ಲಿ ನೀವು ಅಲ್ಲಾಹನನ್ನು ಪ್ರೀತಿಸುತ್ತೀರಿ ಎಂದಾದರೆ ನನ್ನನ್ನು ಅನುಸರಿಸಿರಿ. ಅಲ್ಲಾಹನು ನಿಮ್ಮನ್ನು ಪ್ರೀತಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು ಅಲ್ಲಾಹನು ಅತ್ಯಧಿಕ ಕ್ಷಮಿಸುವವನೂ, ಕರುಣಾನಿಧಿಯೂ ಆಗಿದ್ದಾನೆ.
ಇಮ್ರಾನರ ಪತ್ನಿ ಹೀಗೆ ಪ್ರಾರ್ಥಿಸಿದ ಸಂಧರ್ಭ: ಓ ನನ್ನ ಪ್ರಭೂ, ನನ್ನ ಹೊಟ್ಟೆಯಲ್ಲಿರುವ ಶಿಶುವನ್ನು ನಿನಗಾಗಿಯೇ ಮೀಸಲಿಟ್ಟು ನಾನು ಹರಕೆ ಹೊತ್ತಿರುತ್ತೇನೆ. ನೀನದನ್ನು ನನ್ನಿಂದ ಸ್ವೀಕರಿಸು. ಖಂಡಿತವಾಗಿಯು ನೀನು ಚೆನ್ನಾಗಿ ಆಲಿಸುವವನೂ, ಎಲ್ಲವನ್ನು ಅರಿಯುವವನೂ ಆಗಿರುವೆ.
ಆಕೆ ಹೆಣ್ಣು ಮಗುವನ್ನು ಜನ್ಮ ನೀಡಿದಾಗ ಹೇಳಿದಳು: 'ನನ್ನ ಪ್ರಭು ನನಗೆ ಹೆಣ್ಣು ಮಗುವಾಗಿದೆ-ವಾಸ್ತವದಲ್ಲಿ ಅವಳು ಜನ್ಮವಿತ್ತಿರುವುದೇನೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ ಮತ್ತು ಗಂಡು ಮಗು (ಹರಕೆಗೆ ತಕ್ಕದ್ದಾಗಿತ್ತು ಏಕೆಂದರೆ ಅದು) ಹೆಣ್ಣಿನಂತೆ ದುರ್ಬಲವಾಗಿರುವುದಿಲ್ಲ. ನಿಸ್ಸಂಶಯವಾಗಿ ನಾನು ಅದರ ಹೆಸರು ಮರ್ಯಮ್ ಎಂದು ಇಟ್ಟಿರುವೆನು. ಆಕೆಯನ್ನು ಮತ್ತು ಆಕೆಯ ಸಂತತಿಗಳನ್ನೂ ಬಹಿಷ್ಕೃತ ಶೈತಾನನಿಂದ ನಿನ್ನ ಅಭಯ ಬೇಡುತ್ತೇನೆ.
ಹಾಗೆಯೇ ಅವಳ ಪ್ರಭು ಆಕೆಯನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿದನು ಮತ್ತು ಉತ್ತಮ ರೀತಿಯಲ್ಲಿ ಆಕೆಯ ಪೋಷಣೆಯನ್ನು ಮಾಡಿದನು ಮತ್ತು ಆಕೆಯ ಪರಿಪಾಲನೆಯ ಹೊಣೆಗಾರಿಕೆ ಝಕರಿಯ್ಯಾ(ಅ)ರಿಗೆ ವಹಿಸಿದನು. ಝಕರಿಯ್ಯಾ(ಅ) ಆಕೆಯ ಆರಾಧನೆ ಕೋಣೆಗೆ ಹೋದಾಗಲೆಲ್ಲಾ ಆಕೆಯ ಬಳಿ ಯಾವುದಾದರೂ ಆಹಾರ ಇಡಲಾಗಿರುವುದನ್ನು ಕಾಣುತ್ತಿದ್ದರು. ಒಮ್ಮೆ ಅವರು ಕೇಳಿದರು. ಓ ಮರ್ಯಮ್, ಈ ಆಹಾರವು ನಿನ್ನಲ್ಲಿಗೆ ಎಲ್ಲಿಂದ ಬಂತು? ಆಕೆ ಉತ್ತರಿಸಿದಳು 'ಇದು ಅಲ್ಲಾಹನ ಬಳಿಯಿಂದಾಗಿದೆ'. ನಿಸ್ಸಂದೇಹವಾಗಿಯು ಅಲ್ಲಾಹನು ತಾನಿಚ್ಛಿಸುವವರಿಗೆ ಲೆಕ್ಕವಿಲ್ಲದ್ದಷ್ಟು ನೀಡುತ್ತಾನೆ.