ಮೂಸಾ ತಮ್ಮ ಜನರ ಬಳಿಗೆ ಮರಳಿ ಬಂದಾಗ—ಅವರು ಕೋಪ ಮತ್ತು ಬೇಸರದಿಂದ ಹೇಳಿದರು: “ನನ್ನ ನಿರ್ಗಮನದ ಬಳಿಕ ನೀವು ಮಾಡಿದ ಕೃತ್ಯವು ಅತ್ಯಂತ ಹೇಯವಾಗಿದೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆ ಬರುವುದಕ್ಕೆ ಮೊದಲೇ ನೀವು ಅವಸರಪಟ್ಟಿರಾ?” ಅವರು ಹಲಗೆಗಳನ್ನು ಎಸೆದು ಸಹೋದರನ ತಲೆಗೂದಲನ್ನು ಹಿಡಿದು ಎಳೆದರು. ಅವರು (ಸಹೋದರ) ಹೇಳಿದರು: “ನನ್ನ ತಾಯಿಯ ಮಗನೇ! ನಿಶ್ಚಯವಾಗಿಯೂ ಈ ಜನರು ನನ್ನನ್ನು ದುರ್ಬಲನೆಂದು ಪರಿಗಣಿಸಿದರು. ಅವರು ನನ್ನನ್ನು ಇನ್ನೇನು ಕೊಲ್ಲುವುದರಲ್ಲಿದ್ದರು. ನನ್ನ ಮೇಲೆ ಹಲ್ಲೆ ಮಾಡಿ ವೈರಿಗಳಿಗೆ ಸಂತಸವಾಗುವಂತೆ ಮಾಡಬೇಡ. ಅಕ್ರಮಿಗಳ ಸಾಲಿಗೆ ನನ್ನನ್ನು ಕೂಡ ಸೇರಿಸಿ ಬಿಡಬೇಡ.”
ಕರುವನ್ನು ದೇವರಾಗಿ ಸ್ವೀಕರಿಸಿದವರು ಯಾರೋ—ಅವರು ತಮ್ಮ ಪರಿಪಾಲಕನ (ಅಲ್ಲಾಹನ) ಕೋಪವನ್ನು ಮತ್ತು ಇಹಲೋಕ ಜೀವನದಲ್ಲಿ ನಿಂದ್ಯತೆಯನ್ನು (ಬಳುವಳಿಯಾಗಿ) ಪಡೆಯುವರು. ಸುಳ್ಳು ಆರೋಪಿಸುವವರಿಗೆ ನಾವು ಈ ರೀತಿ ಪ್ರತಿಫಲವನ್ನು ನೀಡುವೆವು.
ಆದರೆ ಪಾಪ ಮಾಡಿದ ಬಳಿಕ ಪಶ್ಚಾತ್ತಾಪಪಡುವವರು ಮತ್ತು ವಿಶ್ವಾಸವಿಡುವವರು ಯಾರೋ—ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನು (ಅಲ್ಲಾಹು) ಅದರ ನಂತರವೂ ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ಮೂಸಾ ತಮ್ಮ ಜನರಲ್ಲಿ ಸೇರಿದ ಎಪ್ಪತ್ತು ಪುರುಷರನ್ನು ನಮ್ಮ ನಿಶ್ಚಿತ ಸಮಯಕ್ಕಾಗಿ ಆರಿಸಿದರು. ಆದರೆ ಭೀಕರ ಕಂಪನವು ಅವರನ್ನು ಹಿಡಿದಾಗ ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನೀನು ಇಚ್ಛಿಸಿದರೆ ಇದಕ್ಕಿಂತ ಮೊದಲೇ ಅವರನ್ನು ಮತ್ತು ನನ್ನನ್ನು ನಾಶ ಮಾಡಬಹುದಿತ್ತು. ನಮ್ಮಲ್ಲಿನ ಅವಿವೇಕಿಗಳು ಮಾಡಿದ ಕೃತ್ಯಕ್ಕೆ ನೀನು ನಮ್ಮನ್ನು ನಾಶ ಮಾಡುವೆಯಾ? ಇದು ನಿನ್ನ ಪರೀಕ್ಷೆಯಾಗಿದೆ. ಇದರ ಮೂಲಕ ನೀನು ಇಚ್ಛಿಸುವವರನ್ನು ನೀನು ದಾರಿತಪ್ಪಿಸುತ್ತೀ ಮತ್ತು ನೀನು ಇಚ್ಛಿಸುವವರಿಗೆ ಸನ್ಮಾರ್ಗ ತೋರಿಸುತ್ತೀ. ನೀನೇ ನಮ್ಮ ರಕ್ಷಕ. ನಮ್ಮನ್ನು ಕ್ಷಮಿಸು ಮತ್ತು ನಮಗೆ ದಯೆ ತೋರು. ನೀನು ಕ್ಷಮಿಸುವವರಲ್ಲಿ ಅತ್ಯುತ್ತಮನಾಗಿರುವೆ.