ನಿಮಗೆ ಎಚ್ಚರಿಕೆ ನೀಡಲು ನಿಮ್ಮಲ್ಲೇ ಇರುವ ಒಬ್ಬ ವ್ಯಕ್ತಿಯ ಮೂಲಕ ನಿಮ್ಮ ಪರಿಪಾಲಕನ (ಅಲ್ಲಾಹನ) ಉಪದೇಶವು ನಿಮ್ಮ ಬಳಿಗೆ ಬಂದಿರುವುದನ್ನು ಕಂಡು ನೀವು ಆಶ್ಚರ್ಯಪಡುತ್ತಿದ್ದೀರಾ? ನೂಹರ ಜನರ ಬಳಿಕ ಅಲ್ಲಾಹು ನಿಮ್ಮನ್ನು ಅವರ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದನ್ನು ಸ್ಮರಿಸಿರಿ. ಅವನು ನಿಮಗೆ ದೇಹದಾರ್ಢ್ಯತೆಯನ್ನು ಹೆಚ್ಚಿಸಿಕೊಟ್ಟನು. ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. ನೀವು ಯಶಸ್ವಿಯಾಗುವುದಕ್ಕಾಗಿ.”
ಅವರು ಹೇಳಿದರು: “ನಾವು ಅಲ್ಲಾಹನನ್ನು ಮಾತ್ರ ಆರಾಧಿಸಬೇಕು ಮತ್ತು ನಮ್ಮ ಪೂರ್ವಜರು ಆರಾಧಿಸುತ್ತಿದ್ದ ದೇವರುಗಳನ್ನು ಬಿಟ್ಟುಬಿಡಬೇಕು ಎಂದು ಹೇಳಲು ನೀನು ನಮ್ಮ ಬಳಿಗೆ ಬಂದಿರುವೆಯಾ? ನೀನು ನಮಗೆ ಹೆದರಿಸುತ್ತಿರುವ ಆ ಶಿಕ್ಷೆಯನ್ನು ತಂದು ತೋರಿಸು. ನೀನು ಸತ್ಯವನ್ನೇ ಹೇಳುತ್ತಿದ್ದರೆ.”
ಹೂದ್ ಹೇಳಿದರು: “ನಿಮ್ಮ ಪರಿಪಾಲಕನ (ಅಲ್ಲಾಹನ) ಶಿಕ್ಷೆ ಮತ್ತು ಕೋಪ ಈಗಾಗಲೇ ನಿಮ್ಮ ಮೇಲೆರಗಿದೆ. ನೀವು ಮತ್ತು ನಿಮ್ಮ ಪೂರ್ವಜರು ಹೆಸರಿಟ್ಟ ಕೆಲವು ದೇವರುಗಳ ಹೆಸರುಗಳನ್ನು ಹೇಳಿ ನೀವು ನನ್ನೊಂದಿಗೆ ತರ್ಕಿಸುತ್ತೀರಾ? ಅಲ್ಲಾಹು ಅದಕ್ಕೆ (ಅವರು ದೇವರುಗಳು ಎಂಬುದಕ್ಕೆ) ಯಾವುದೇ ಸಾಕ್ಷ್ಯಾಧಾರಗಳನ್ನು ಇಳಿಸಿಲ್ಲ. ನೀವು ಕಾಯಿರಿ. ನಿಶ್ಚಯವಾಗಿಯೂ ನಾನೂ ನಿಮ್ಮೊಂದಿಗೆ ಕಾಯುತ್ತೇನೆ.”
ಸಮೂದ್ ಗೋತ್ರದವರ ಬಳಿಗೆ ನಾವು ಅವರ ಸಹೋದರ ಸ್ವಾಲಿಹರನ್ನು ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಬೇರೆ ದೇವರಿಲ್ಲ. ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟ ಸಾಕ್ಷ್ಯಾಧಾರಗಳು ಬಂದಿವೆ. ಇದು ಅಲ್ಲಾಹನ ಒಂಟೆ. ಇದು ನಿಮಗೆ ದೃಷ್ಟಾಂತವಾಗಿದೆ. ಅದನ್ನು ಅದರ ಪಾಡಿಗೆ ಬಿಟ್ಟುಬಿಡಿ. ಅದು ಅಲ್ಲಾಹನ ಭೂಮಿಯಲ್ಲಿ ಮೇಯುತ್ತಿರಲಿ. ಅದಕ್ಕೆ ಯಾವುದೇ ತೊಂದರೆ ಕೊಡಬೇಡಿ. ಹಾಗೇನಾದರೂ ಆದರೆ ಯಾತನಾಮಯ ಶಿಕ್ಷೆಯು ನಿಮ್ಮನ್ನು ಹಿಡಿಯುವುದು.