ನೀವು ಅವರಿಗೆ ಒಂದು ದೃಷ್ಟಾಂತವನ್ನು ತಂದು ತೋರಿಸದಿದ್ದರೆ, ಅವರು ಹೇಳುತ್ತಾರೆ: “ನೀವೇ ಅದನ್ನು ರಚಿಸಿ ತರಬಾರದೇ?” ಹೇಳಿರಿ: “ನನ್ನ ಪರಿಪಾಲಕನಿಂದ (ಅಲ್ಲಾಹನಿಂದ) ಬರುವ ದೇವವಾಣಿಗಳನ್ನು ಮಾತ್ರ ನಾನು ಅನುಸರಿಸುತ್ತೇನೆ. ಇದು (ಕುರ್‌ಆನ್) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಕಣ್ತೆರೆಸುವ ಸಾಕ್ಷ್ಯಾಧಾರವಾಗಿದೆ ಮತ್ತು ವಿಶ್ವಾಸವಿಡುವ ಜನರಿಗೆ ಸನ್ಮಾರ್ಗ ಮತ್ತು ದಯೆಯಾಗಿದೆ.”
ವಿನಯ ಮತ್ತು ಭಯದಿಂದ ಧ್ವನಿಯನ್ನು ತಗ್ಗಿಸಿ ಮುಂಜಾನೆ ಮತ್ತು ಸಂಜೆ ನೀವು ನಿಮ್ಮ ಮನಸ್ಸಿನಲ್ಲೇ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಸ್ಮರಿಸಿರಿ. ನೀವು ನಿರ್ಲಕ್ಷ್ಯರಾಗಿರುವವರಲ್ಲಿ ಸೇರಬೇಡಿ.
ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿಯಿರುವವರು (ದೇವದೂತರು) ಅವನನ್ನು ಆರಾಧಿಸುವ ವಿಷಯದಲ್ಲಿ ಅಹಂಕಾರ ತೋರುವುದಿಲ್ಲ. ಅವರು ಅವನ ಪರಿಶುದ್ಧಿಯನ್ನು ಕೊಂಡಾಡುತ್ತಾರೆ ಮತ್ತು ಅವನಿಗೆ ಸಾಷ್ಟಾಂಗ ಮಾಡುತ್ತಾರೆ.