ನಾವು ಇಸ್ರಾಯೇಲ್ ಮಕ್ಕಳನ್ನು ಸಮುದ್ರ ದಾಟಿಸಿ ರಕ್ಷಿಸಿದೆವು. ಅಲ್ಲಿ ಅವರು ವಿಗ್ರಹಗಳ ಮುಂದೆ ಧ್ಯಾನಮಗ್ನರಾಗಿ ಕುಳಿತಿದ್ದ ಜನರನ್ನು ಕಂಡರು. ಅವರು ಹೇಳಿದರು: “ಓ ಮೂಸಾ! ಇವರಿಗೆ ದೇವರುಗಳು ಇರುವಂತೆ ನಮಗೂ ಒಬ್ಬ ದೇವನನ್ನು ಮಾಡಿಕೊಡಿ.” ಮೂಸಾ ಹೇಳಿದರು: “ನಿಶ್ಚಯವಾಗಿಯೂ ನೀವು ವಿವೇಕರಹಿತ ಜನರಾಗಿದ್ದೀರಿ.
ನಿಮಗೆ ಕಠೋರ ಹಿಂಸೆ ನೀಡುತ್ತಿದ್ದ, ನಿಮ್ಮ ಗಂಡು ಮಕ್ಕಳ ಕತ್ತು ಕೊಯ್ಯುತ್ತಿದ್ದ ಮತ್ತು ನಿಮ್ಮ ಹೆಣ್ಣು ಮಕ್ಕಳನ್ನು ಜೀವಂತ ಬಿಡುತ್ತಿದ್ದ ಫರೋಹನ ಜನರಿಂದ ನಾವು ನಿಮ್ಮನ್ನು ರಕ್ಷಿಸಿದ ಸಂದರ್ಭ(ವನ್ನು ಸ್ಮರಿಸಿ). ನಿಶ್ಚಯವಾಗಿಯೂ ಅದರಲ್ಲಿ (ನಿಮ್ಮನ್ನು ರಕ್ಷಿಸಿದ್ದರಲ್ಲಿ) ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಮಹಾ ಪರೀಕ್ಷೆಯಿತ್ತು.
ನಾವು ಮೂಸಾರಿಗೆ ಮೂವತ್ತು ರಾತ್ರಿಗಳನ್ನು ವಾಗ್ದಾನ ಮಾಡಿದೆವು ಮತ್ತು ಅದಕ್ಕೆ ಹತ್ತು ಸೇರಿಸಿ ಪೂರ್ಣಗೊಳಿಸಿದೆವು. ಹೀಗೆ ಮೂಸಾರ ಪರಿಪಾಲಕನು (ಅಲ್ಲಾಹು) ನಿಶ್ಚಯಿಸಿದ ನಲ್ವತ್ತು ರಾತ್ರಿಗಳ ಅವಧಿಯು ಪೂರ್ಣವಾಯಿತು. ಮೂಸಾ ತಮ್ಮ ಸಹೋದರ ಹಾರೂನರಿಗೆ ಹೇಳಿದರು: “ನನ್ನ ಜನರಿಗೆ ನನ್ನ ಪ್ರತಿನಿಧಿಯಾಗಿರು. ಒಳಿತನ್ನು ಮಾಡು. ಕಿಡಿಗೇಡಿಗಳ ಮಾರ್ಗವನ್ನು ಹಿಂಬಾಲಿಸಬೇಡ.”
ನಮ್ಮ ನಿಶ್ಚಿತ ಸಮಯಕ್ಕೆ ಮೂಸಾ ಬಂದಾಗ ಮತ್ತು ಅವರ ಪರಿಪಾಲಕನು (ಅಲ್ಲಾಹು) ಅವರೊಡನೆ ಮಾತನಾಡಿದಾಗ ಅವರು ಹೇಳಿದರು: “ಓ ನನ್ನ ಪರಿಪಾಲಕನೇ! ನಿನ್ನನ್ನು ನನಗೆ ತೋರಿಸಿಕೊಡು. ನಾನು ನಿನ್ನನ್ನು ನೋಡಬೇಕು.” ಅಲ್ಲಾಹು ಹೇಳಿದನು: “ನಿಮಗೆ ನನ್ನನ್ನು ನೋಡಲು ಸಾಧ್ಯವಿಲ್ಲ. ಬದಲಿಗೆ, ನೀವು ಆ ಬೆಟ್ಟವನ್ನು ನೋಡಿರಿ. ಅದು ಅದರ ಸ್ಥಳದಲ್ಲಿಯೇ ಕದಲದೆ ನಿಂತರೆ ನೀವು ನನ್ನನ್ನು ನೋಡುವಿರಿ.” ನಂತರ ಅವರ ಪರಿಪಾಲಕನು (ಅಲ್ಲಾಹು) ಆ ಬೆಟ್ಟಕ್ಕೆ ತನ್ನನ್ನು ಪ್ರಕಟಗೊಳಿಸಿದಾಗ, ಅವನ ತೇಜಸ್ಸು ಅದನ್ನು ನುಚ್ಚುನೂರು ಮಾಡಿತು. ಮೂಸಾ ಪ್ರಜ್ಞೆ ತಪ್ಪಿ ಬಿದ್ದರು. ನಂತರ ಪ್ರಜ್ಞೆ ಬಂದಾಗ ಅವರು ಹೇಳಿದರು: “ನೀನು ಪರಿಶುದ್ಧನು. ನಾನು ನಿನ್ನ ಬಳಿಗೆ ಪಶ್ಚಾತ್ತಾಪದಿಂದ ಮರಳಿದ್ದೇನೆ. ನಾನು ಸತ್ಯವಿಶ್ವಾಸಿಗಳಲ್ಲಿ ಮೊದಲಿಗನಾಗಿದ್ದೇನೆ.”