ನಮ್ಮ ನಿಶ್ಚಿತ ಸಮಯಕ್ಕೆ ಮೂಸಾ ಬಂದಾಗ ಮತ್ತು ಅವರ ಪರಿಪಾಲಕನು (ಅಲ್ಲಾಹು) ಅವರೊಡನೆ ಮಾತನಾಡಿದಾಗ ಅವರು ಹೇಳಿದರು: “ಓ ನನ್ನ ಪರಿಪಾಲಕನೇ! ನಿನ್ನನ್ನು ನನಗೆ ತೋರಿಸಿಕೊಡು. ನಾನು ನಿನ್ನನ್ನು ನೋಡಬೇಕು.” ಅಲ್ಲಾಹು ಹೇಳಿದನು: “ನಿಮಗೆ ನನ್ನನ್ನು ನೋಡಲು ಸಾಧ್ಯವಿಲ್ಲ. ಬದಲಿಗೆ, ನೀವು ಆ ಬೆಟ್ಟವನ್ನು ನೋಡಿರಿ. ಅದು ಅದರ ಸ್ಥಳದಲ್ಲಿಯೇ ಕದಲದೆ ನಿಂತರೆ ನೀವು ನನ್ನನ್ನು ನೋಡುವಿರಿ.” ನಂತರ ಅವರ ಪರಿಪಾಲಕನು (ಅಲ್ಲಾಹು) ಆ ಬೆಟ್ಟಕ್ಕೆ ತನ್ನನ್ನು ಪ್ರಕಟಗೊಳಿಸಿದಾಗ, ಅವನ ತೇಜಸ್ಸು ಅದನ್ನು ನುಚ್ಚುನೂರು ಮಾಡಿತು. ಮೂಸಾ ಪ್ರಜ್ಞೆ ತಪ್ಪಿ ಬಿದ್ದರು. ನಂತರ ಪ್ರಜ್ಞೆ ಬಂದಾಗ ಅವರು ಹೇಳಿದರು: “ನೀನು ಪರಿಶುದ್ಧನು. ನಾನು ನಿನ್ನ ಬಳಿಗೆ ಪಶ್ಚಾತ್ತಾಪದಿಂದ ಮರಳಿದ್ದೇನೆ. ನಾನು ಸತ್ಯವಿಶ್ವಾಸಿಗಳಲ್ಲಿ ಮೊದಲಿಗನಾಗಿದ್ದೇನೆ.”