ಅವರಿಗೆ ಒಳಿತುಂಟಾದರೆ, “ಇದು ನಮ್ಮ ಸಿಗಬೇಕಾದ ಹಕ್ಕು” ಎಂದು ಅವರು ಹೇಳುತ್ತಾರೆ. ಅವರಿಗೆ ಕೆಡುಕು ಬಾಧಿಸಿದರೆ ಮೂಸಾ ಮತ್ತು ಅವರ ಅನುಯಾಯಿಗಳನ್ನು ಅಪಶಕುನವಾಗಿ ಕಾಣುತ್ತಾರೆ. ತಿಳಿಯಿರಿ! ಅವರ ಶಕುನವು ಅಲ್ಲಾಹನ ಬಳಿಯಲ್ಲಿದೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
ಆಗ ನಾವು ಅವರ ವಿರುದ್ಧ ಪ್ರವಾಹ, ಮಿಡತೆ, ಹೇನು, ಕಪ್ಪೆಗಳು ಮತ್ತು ರಕ್ತವನ್ನು ಸ್ಪಷ್ಟ ದೃಷ್ಟಾಂತಗಳಾಗಿ ಕಳುಹಿಸಿದೆವು. ಆದರೆ ಅವರು ಅಹಂಕಾರದಿಂದ ವರ್ತಿಸಿದರು. ಅವರು ಅಪರಾಧವೆಸಗಿದ ಜನರಾಗಿದ್ದರು.
ಶಿಕ್ಷೆಯು ಅವರ ಮೇಲೆರಗಿದಾಗ ಅವರು ಹೇಳಿದರು: “ಓ ಮೂಸಾ! ನಿಮ್ಮ ಪರಿಪಾಲಕನು (ಅಲ್ಲಾಹು) ನಿಮಗೆ ನೀಡಿದ ಭರವಸೆಯಂತೆ ನೀವು ಅವನನ್ನು ಕರೆದು ಪ್ರಾರ್ಥಿಸಿರಿ. ನೀವು ಈ ಶಿಕ್ಷೆಯನ್ನು ನಮ್ಮಿಂದ ನಿವಾರಿಸಿದರೆ ನಾವು ಖಂಡಿತ ವಿಶ್ವಾಸವಿಡುವೆವು ಮತ್ತು ಇಸ್ರಾಯೇಲ್ ಮಕ್ಕಳನ್ನು ಖಂಡಿತ ನಿಮ್ಮ ಜೊತೆಗೆ ಕಳುಹಿಸಿಕೊಡುವೆವು.”
ಆದ್ದರಿಂದ ನಾವು ಅವರಿಂದ ಪ್ರತೀಕಾರ ಪಡೆದೆವು ಮತ್ತು ಅವರನ್ನು ಸಮುದ್ರದಲ್ಲಿ ಮುಳುಗಿಸಿ ಬಿಟ್ಟೆವು. ಏಕೆಂದರೆ, ಅವರು ನಮ್ಮ ವಚನಗಳನ್ನು ನಿಷೇಧಿಸಿದ್ದರು ಮತ್ತು ಅವುಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದರು.
ದಬ್ಬಾಳಿಕೆಗೆ ಗುರಿಯಾದ ಜನರನ್ನು (ಇಸ್ರಾಯೇಲ್ ಮಕ್ಕಳನ್ನು) ನಾವು ಸಮೃದ್ಧಗೊಳಿಸಿದ ಭೂಮಿಯ ಪೂರ್ವ ಮತ್ತು ಪಶ್ಚಿಮ ಭಾಗಗಳ ಉತ್ತರಾಧಿಕಾರಿಗಳಾಗಿ ಮಾಡಿದೆವು. ಇಸ್ರಾಯೇಲ್ ಮಕ್ಕಳು ತಾಳ್ಮೆ ತೋರಿದ ಕಾರಣ ಅವರಿಗೆ ಸಂಬಂಧಿಸಿದ ನಿಮ್ಮ ಪರಿಪಾಲಕನ (ಅಲ್ಲಾಹನ) ಉತ್ತಮ ವಚನವು ನೆರವೇರಿತು. ಫರೋಹ ಮತ್ತು ಅವನ ಜನರು ನಿರ್ಮಿಸಿದ್ದನ್ನು ಮತ್ತು ಅವರು ಎತ್ತರಿಸಿ ಕಟ್ಟಿದ್ದನ್ನು ನಾವು ನಾಶ ಮಾಡಿದೆವು.