ಅಲ್ಲಾಹು ಕೇಳಿದನು: “ನಾನು ಸಾಷ್ಟಾಂಗ ಮಾಡಲು ಆಜ್ಞಾಪಿಸಿದಾಗ ನೀನು ಅದನ್ನು ನಿರಾಕರಿಸಲು ಕಾರಣವೇನು?” ಇಬ್ಲೀಸ್ ಹೇಳಿದನು: “ನಾನು ಆದಮರಿಗಿಂತಲೂ ಶ್ರೇಷ್ಠನು. ನೀನು ನನ್ನನ್ನು ಸೃಷ್ಟಿಸಿದ್ದು ಅಗ್ನಿಯಿಂದ ಮತ್ತು ಅವರನ್ನು ಸೃಷ್ಟಿಸಿದ್ದು ಜೇಡಿಮಣ್ಣಿನಿಂದ.”
ಅಲ್ಲಾಹು ಹೇಳಿದನು: “ಇಲ್ಲಿಂದ ಹೊರಡು! ನೀನು ಅಪಮಾನಿತನು ಮತ್ತು ತಿರಸ್ಕೃತನಾಗಿರುವೆ. ಅವರಲ್ಲಿ ಯಾರು ನಿನ್ನನ್ನು ಹಿಂಬಾಲಿಸುತ್ತಾರೋ, (ಅವರು ಸೇರಿದಂತೆ) ನಿಮ್ಮೆಲ್ಲರನ್ನೂ ನಾನು ನರಕದಲ್ಲಿ ತುಂಬಿಸುವೆನು.”
“ಓ ಆದಮ್! ನೀವು ಮತ್ತು ನಿಮ್ಮ ಪತ್ನಿ ಸ್ವರ್ಗದಲ್ಲಿ ವಾಸಿಸಿರಿ. ಅಲ್ಲಿ ನೀವುಇಚ್ಛಿಸುವ ಎಲ್ಲಾ ಕಡೆಗಳಿಂದಲೂ ತಿನ್ನಿರಿ. ಆದರೆ ಈ ಮರದ ಸಮೀಪಕ್ಕೆ ಹೋಗಬೇಡಿ. ಹೋದರೆ ನೀವು ಅಕ್ರಮಿಗಳಾಗಿ ಬಿಡುವಿರಿ.”
(ಆಗ ಆ ಹಣ್ಣನ್ನು ತಿನ್ನುವ ಮೂಲಕ) ಅವರಿಂದ ಮರೆಯಾಗಿದ್ದ ಅವರ ಗುಹ್ಯಭಾಗಗಳನ್ನು ಬಹಿರಂಗಪಡಿಸುವುದಕ್ಕಾಗಿ ಶೈತಾನನು ಅವರಿಬ್ಬರಿಗೂ (ಆ ಹಣ್ಣು ತಿನ್ನುವಂತೆ) ದುಷ್ಪ್ರೇರಣೆ ಮಾಡಿದನು. ಅವನು ಹೇಳಿದನು: “ನೀವಿಬ್ಬರು ದೇವದೂತರಾಗುವಿರಿ ಅಥವಾ ಇಲ್ಲಿ (ಸ್ವರ್ಗದಲ್ಲಿ) ಶಾಶ್ವತವಾಗಿ ವಾಸಿಸುವಿರಿ ಎಂಬ ಕಾರಣದಿಂದಲೇ ನಿಮ್ಮ ಪರಿಪಾಲಕನು ನಿಮ್ಮನ್ನು ಈ ಮರದಿಂದ ತಡೆದಿದ್ದಾನೆ.”
ಹೀಗೆ ಅವನು ಮೋಸದಿಂದ ಅವರಿಬ್ಬರನ್ನು ಕೆಳಗಿಳಿಸಿದನು. ಅವರಿಬ್ಬರು ಆ ಮರದ ಹಣ್ಣಿನ ರುಚಿಯನ್ನು ಸವಿಯುತ್ತಿದ್ದಂತೆ ಅವರಿಗೆ ಅವರ ಗುಹ್ಯಭಾಗಗಳು ಬಹಿರಂಗವಾದವು. ಸ್ವರ್ಗದ ಎಲೆಗಳಿಂದ ಅವರಿಬ್ಬರೂ ತಮ್ಮ ದೇಹಗಳನ್ನು ಮುಚ್ಚತೊಡಗಿದರು. ಆಗ ಅವರನ್ನು ಕರೆದು ಅವರ ಪರಿಪಾಲಕ (ಅಲ್ಲಾಹು) ಹೇಳಿದನು: “ಆ ಮರದಿಂದ ನಾನು ನಿಮ್ಮನ್ನು ತಡೆಯಲಿಲ್ಲವೇ? ನಿಶ್ಚಯವಾಗಿಯೂ ಶೈತಾನನು ನಿಮ್ಮ ಪ್ರತ್ಯಕ್ಷ ಶತ್ರುವೆಂದು ನಾನು ನಿಮಗೆ ಹೇಳಲಿಲ್ಲವೇ?”