ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ನಮಗೆ ಒಳಿತನ್ನು ದಾಖಲಿಸು. ನಿಶ್ಚಯವಾಗಿಯೂ ನಾವು ನಿನ್ನ ಕಡೆಗೆ ಮರಳಿದ್ದೇವೆ.” ಅಲ್ಲಾಹು ಹೇಳಿದನು: “ನಾನು ಇಚ್ಛಿಸುವವರನ್ನು ನಾನು ಶಿಕ್ಷಿಸುವೆನು. ಆದರೆ ನನ್ನ ದಯೆ ಎಲ್ಲಾ ವಸ್ತುಗಳನ್ನು ಆವರಿಸಿಕೊಂಡಿದೆ. ದೇವಭಯದಿಂದ ಜೀವಿಸುವ, ಝಕಾತ್ ನೀಡುವ ಮತ್ತು ನಮ್ಮ ವಚನಗಳಲ್ಲಿ ವಿಶ್ವಾಸವಿಡುವ ಜನರಿಗೆ ನಾನು ಅದನ್ನು (ದಯೆಯನ್ನು) ದಾಖಲಿಸುವೆನು.
ಅವರು ಯಾರೆಂದರೆ, ತಮ್ಮ ಬಳಿಯಿರುವ ತೌರಾತ್ ಮತ್ತು ಇಂಜೀಲ್‍ನಲ್ಲಿ ಉಲ್ಲೇಖವಿರುವುದಾಗಿ ಕಾಣುವ ಅನಕ್ಷರಸ್ಥ ಪ್ರವಾದಿಯಾದ ಸಂದೇಶವಾಹಕರನ್ನು (ಪ್ರವಾದಿ ಮುಹಮ್ಮದರನ್ನು) ಅನುಸರಿಸುವವರು. ಆ ಪ್ರವಾದಿ ಅವರಿಗೆ ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ. ಅವರಿಗೆ ಉತ್ತಮ ವಸ್ತುಗಳನ್ನು ಅನುಮತಿಸುತ್ತಾರೆ ಮತ್ತು ಕೆಟ್ಟ ವಸ್ತುಗಳನ್ನು ನಿಷೇಧಿಸುತ್ತಾರೆ. ಅವರ ಭಾರವನ್ನು ಕೆಳಗಿಳಿಸಿ ಅವರ ಮೇಲೆ ಹೊರಿಸಲಾಗಿದ್ದ ಸಂಕೋಲೆಗಳನ್ನು ಕಳಚುತ್ತಾರೆ. ಆ ಪ್ರವಾದಿಯಲ್ಲಿ ವಿಶ್ವಾಸವಿಡುವವರು, ಅವರನ್ನು ಬೆಂಬಲಿಸುವವರು, ಸಹಾಯ ಮಾಡುವವರು ಮತ್ತು ಅವರೊಂದಿಗೆ ಅವತೀರ್ಣವಾದ ಬೆಳಕನ್ನು ಅನುಸರಿಸುವವರು ಯಾರೋ—ಅವರೇ ಯಶಸ್ವಿಯಾದವರು.
ಹೇಳಿರಿ: “ಓ ಮನುಷ್ಯರೇ! ನಿಶ್ಚಯವಾಗಿಯೂ ನಾನು ನಿಮ್ಮೆಲ್ಲರ ಬಳಿಗೆ (ಕಳುಹಿಸಲಾದ) ಅಲ್ಲಾಹನ ಸಂದೇಶವಾಹಕನಾಗಿದ್ದೇನೆ. ಅಂದರೆ, ಭೂಮ್ಯಾಕಾಶಗಳ ಆಧಿಪತ್ಯವು ಯಾರಿಗೆ ಸೇರಿದ್ದೋ ಅವನ (ಸಂದೇಶವಾಹಕ). ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಜೀವ ಮತ್ತು ಮರಣವನ್ನು ನೀಡುತ್ತಾನೆ.” ಆದ್ದರಿಂದ ನೀವು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ—ಅಂದರೆ ಅಲ್ಲಾಹನಲ್ಲಿ ಮತ್ತು ಅವನ ವಚನಗಳಲ್ಲಿ ವಿಶ್ವಾಸವಿಡುವ ಆ ಅನಕ್ಷರಸ್ಥ ಪ್ರವಾದಿಯಲ್ಲಿ ವಿಶ್ವಾಸವಿಟ್ಟು ಅವರನ್ನು ಅನುಸರಿಸಿರಿ. ನೀವು ಸನ್ಮಾರ್ಗ ಪಡೆಯುವುದಕ್ಕಾಗಿ.