ಹೇಳಿರಿ: “ನಾನು ನನಗಾಗಿ ಯಾವುದೇ ಲಾಭ ಅಥವಾ ತೊಂದರೆ ಮಾಡುವ ಅಧಿಕಾರವನ್ನು ಹೊಂದಿಲ್ಲ—ಅಲ್ಲಾಹು ಏನು ಇಚ್ಛಿಸುತ್ತಾನೋ ಅದರ ಹೊರತು. ನನಗೆ ಅದೃಶ್ಯ ಜ್ಞಾನವಿರುತ್ತಿದ್ದರೆ, ನಾನು ಹೇರಳ ಒಳಿತುಗಳನ್ನು ಮಾಡುತ್ತಿದ್ದೆ. ಕೆಡುಕು ನನ್ನನ್ನು ಸ್ಪರ್ಶಿಸುತ್ತಲೇ ಇರಲಿಲ್ಲ. ವಿಶ್ವಾಸವಿಡುವ ಜನರಿಗೆ ನಾನೊಬ್ಬ ಮುನ್ನೆಚ್ಚರಿಕೆಗಾರ ಮತ್ತು ಸುವಾರ್ತೆ ನೀಡುವವ ಮಾತ್ರವಾಗಿದ್ದೇನೆ.”
ನಿಮ್ಮನ್ನು ಒಂದೇ ದೇಹದಿಂದ ಸೃಷ್ಟಿಸಿದವನು ಅವನೇ. ನಂತರ ಅವನಿಂದ ಅವನ ಪತ್ನಿಯನ್ನು ಸೃಷ್ಟಿಸಿದನು—ಅವನು ಅವಳಿಂದ ನೆಮ್ಮದಿ ಪಡೆಯುವುದಕ್ಕಾಗಿ. ನಂತರ ಅವನು ಅವಳೊಡನೆ ಸೇರಿದಾಗ ಅವಳು ಹಗುರವಾದ ಗರ್ಭ ಧರಿಸಿ, ನಂತರ ಅದರೊಂದಿಗೆ ಮುಂದುವರಿದಳು. ಅವಳ ಭಾರವು ಹೆಚ್ಚಾದಾಗ (ಹೆರಿಗೆ ನೋವು ಗೋಚರಿಸಿದಾಗ) ಅವರಿಬ್ಬರೂ ಅವರ ಪರಿಪಾಲಕನಾದ ಅಲ್ಲಾಹನನ್ನು ಕರೆದು ಪ್ರಾರ್ಥಿಸಿದರು: “ನೀನು ನಮಗೆ ನೀತಿವಂತ ಮಗುವನ್ನು ನೀಡಿದರೆ ನಾವು ಖಂಡಿತ ನಿನಗೆ ಆಭಾರಿಯಾಗುವೆವು.”
ಅವನು ಅವರಿಗೆ ನೀತಿವಂತ ಮಗುವನ್ನು ನೀಡಿದಾಗ, ಅವನು ಅವರಿಗೆ ನೀಡಿದ್ದರಲ್ಲಿಯೇ ಅವರು ಅವನಿಗೆ ಸಹಭಾಗಿಗಳನ್ನು ನಿಶ್ಚಯಿಸಿದರು. ಅವರು ಮಾಡುವ ಸಹಭಾಗಿತ್ವದಿಂದ ಅಲ್ಲಾಹು ಎಷ್ಟೋ ಉನ್ನತನಾಗಿದ್ದಾನೆ.
ನೀವು ಅಲ್ಲಾಹನನ್ನು ಬಿಟ್ಟು ಯಾರನ್ನು ಕರೆದು ಪ್ರಾರ್ಥಿಸುತ್ತೀರೋ ಅವರು (ಆ ದೇವರುಗಳು) ನಿಶ್ಚಯವಾಗಿಯೂ ನಿಮ್ಮಂತಹ ಸೃಷ್ಟಿಗಳಾಗಿದ್ದಾರೆ. ಅವರನ್ನು ಕರೆದು ಪ್ರಾರ್ಥಿಸಿರಿ; ಅವರು ನಿಮಗೆ ಉತ್ತರ ನೀಡುತ್ತಾರೋ ನೋಡೋಣ. ನೀವು ಸತ್ಯವಂತರಾಗಿದ್ದರೆ.
ಅವರಿಗೆ ನಡೆಯಲು ಸಾಧ್ಯವಾಗುವ ಕಾಲುಗಳಿವೆಯೇ? ಅವರಿಗೆ ಹಿಡಿಯಲು ಸಾಧ್ಯವಾಗುವ ಕೈಗಳಿವೆಯೇ? ಅವರಿಗೆ ನೋಡಲು ಸಾಧ್ಯವಾಗುವ ಕಣ್ಣುಗಳಿವೆಯೇ? ಅವರಿಗೆ ಕೇಳಲು ಸಾಧ್ಯವಾಗುವ ಕಿವಿಗಳಿವೆಯೇ? ಹೇಳಿರಿ: “ನೀವು ನಿಮ್ಮ ಸಹಭಾಗಿಗಳನ್ನು (ದೇವರುಗಳನ್ನು) ಕರೆಯಿರಿ. ನಂತರ ನನ್ನ ಮೇಲೆ ನಿಮ್ಮ ತಂತ್ರವನ್ನು ಪ್ರಯೋಗಿಸಿರಿ. ನನಗೆ ಕಾಲಾವಕಾಶ ನೀಡಬೇಡಿ.”