ಓ ಆದಮರ ಮಕ್ಕಳೇ! ಎಲ್ಲಾ ಆರಾಧನಾ ಸ್ಥಳಗಳಲ್ಲೂ (ವೇಳೆಗಳಲ್ಲೂ) ಉಡುಪುಗಳನ್ನು ಧರಿಸಿರಿ.[1] ನೀವು ತಿನ್ನಿರಿ ಮತ್ತು ಕುಡಿಯಿರಿ. ಆದರೆ ದುರ್ವ್ಯಯ ಮಾಡಬೇಡಿ. ದುರ್ವ್ಯಯ ಮಾಡುವವರನ್ನು ಅಲ್ಲಾಹು ಇಷ್ಟಪಡುವುದಿಲ್ಲ.
[1] ಮಕ್ಕಾದ ಬಹುದೇವಾರಾಧಕರು ನಗ್ನರಾಗಿ ಕಅಬಾಲಯಕ್ಕೆ ತವಾಫ್ (ಪ್ರದಕ್ಷಿಣೆ) ಮಾಡುತ್ತಿದ್ದರು. ನಾವು ಹುಟ್ಟಿದ ಸ್ಥಿತಿಯಲ್ಲೇ ತವಾಫ್ ಮಾಡುತ್ತೇವೆಂದು ಅವರು ಹೇಳುತ್ತಿದ್ದರು. ಅಲ್ಲಾಹನ ಆಜ್ಞೋಲ್ಲಂಘನೆ ಮಾಡಿದ ಬಟ್ಟೆಗಳನ್ನು ಧರಿಸಿ ಆರಾಧನೆ ಮಾಡಿದರೆ ಸಿಂಧುವಾಗುವುದಿಲ್ಲ ಎಂಬ ನಂಬಿಕೆ ಅವರಲ್ಲಿತ್ತು. ಆದರೆ ಇಸ್ಲಾಂ ಇವೆಲ್ಲವನ್ನೂ ವಿರೋಧಿಸುತ್ತದೆ.
ಹೇಳಿರಿ: “ಅಲ್ಲಾಹು ತನ್ನ ದಾಸರಿಗೆ ಹೊರತಂದ ಅಲಂಕಾರದ ಉಡುಪುಗಳನ್ನು ಮತ್ತು ಉತ್ತಮ ಆಹಾರಗಳನ್ನು ನಿಷೇಧಿಸಿದ್ದು ಯಾರು?” ಹೇಳಿರಿ: “ಇಹಲೋಕದಲ್ಲಿ ಅವು ಸತ್ಯವಿಶ್ವಾಸಿಗಳಿಗೆ (ಮತ್ತು ಇತರರಿಗೆ) ಇರುವುದಾಗಿದೆ. ಪುನರುತ್ಥಾನ ದಿನದಲ್ಲಿ ವಿಶೇಷವಾಗಿ ಸತ್ಯವಿಶ್ವಾಸಿಗಳಿಗೆ ಮಾತ್ರ ಇರುವುದಾಗಿದೆ.” ಈ ರೀತಿಯಲ್ಲಿ ನಾವು ತಿಳಿದುಕೊಳ್ಳುವ ಜನರಿಗಾಗಿ ವಚನಗಳನ್ನು ವಿವರಿಸಿಕೊಡುತ್ತೇವೆ.
ಹೇಳಿರಿ: “ನನ್ನ ಪರಿಪಾಲಕ (ಅಲ್ಲಾಹು) ನಿಷೇಧಿಸಿರುವುದು ಪ್ರತ್ಯಕ್ಷ ಮತ್ತು ಪರೋಕ್ಷವಾಗಿರುವ ಅಶ್ಲೀಲಕೃತ್ಯಗಳು, ಪಾಪಗಳು, ನ್ಯಾಯರಹಿತವಾದ ದಬ್ಬಾಳಿಕೆಗಳು, ಅಲ್ಲಾಹು ಯಾವುದೇ ಸಾಕ್ಷ್ಯಾಧಾರ ಇಳಿಸಿಕೊಡದ ವಸ್ತುಗಳನ್ನು ಅವನಿಗೆ ಸಹಭಾಗಿಯನ್ನಾಗಿ ಮಾಡುವುದು ಮತ್ತು ಅಲ್ಲಾಹನ ಬಗ್ಗೆ ನಿಮ್ಮ ತಿಳಿದಿಲ್ಲದ ವಿಷಯಗಳನ್ನು ಹೇಳುವುದು ಮಾತ್ರವಾಗಿವೆ.”
ಓ ಆದಮರ ಮಕ್ಕಳೇ! ನನ್ನ ವಚನಗಳನ್ನು ವಿವರಿಸಿಕೊಡುವ ಸಂದೇಶವಾಹಕರುಗಳು ನಿಮ್ಮಿಂದಲೇ ನಿಮ್ಮ ಬಳಿಗೆ ಬಂದರೆ—ಆಗ ಯಾರು ದೇವಭಯದಿಂದ ಜೀವಿಸುತ್ತಾರೋ ಮತ್ತು ಸ್ವಯಂ ಸುಧಾರಿಸಿಕೊಳ್ಳುತ್ತಾರೋ ಅವರಿಗೆ ಯಾವುದೇ ಭಯವಿಲ್ಲ; ಅವರು ದುಃಖಿಸುವುದೂ ಇಲ್ಲ.
ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ಅವನ ವಚನಗಳನ್ನು ನಿಷೇಧಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ಅವರು (ಅಲ್ಲಾಹನ) ದಾಖಲೆಯಲ್ಲಿ ಅವರಿಗೆ ನಿಶ್ಚಯಿಸಲಾದ ಪಾಲನ್ನು ಪಡೆಯುವರು. ಎಲ್ಲಿಯವರೆಗೆಂದರೆ, ಅವರ ಪ್ರಾಣ ತೆಗೆಯಲು ನಮ್ಮ ದೂತರು (ದೇವದೂತರು) ಅವರ ಬಳಿಗೆ ಬರುವಾಗ, ಅವರು (ದೇವದೂತರು) ಕೇಳುವರು: “ನೀವು ಅಲ್ಲಾಹನನ್ನು ಬಿಟ್ಟು ಕರೆದು ಪ್ರಾರ್ಥಿಸುತ್ತಿದ್ದವರು ಎಲ್ಲಿದ್ದಾರೆ?” ಅವರು ಉತ್ತರಿಸುವರು: “ಅವರು ನಮ್ಮನ್ನು ಬಿಟ್ಟು ಹೋದರು.” ಅವರು ಸತ್ಯನಿಷೇಧಿಗಳಾಗಿದ್ದರೆಂದು ಅವರೇ ಅವರ ವಿರುದ್ಧ ಸಾಕ್ಷಿ ನುಡಿದಿದ್ದಾರೆ.