ಆದ್ ಗೋತ್ರದವರ ಬಳಿಕ ಅವನು ನಿಮ್ಮನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದನ್ನು ಸ್ಮರಿಸಿರಿ. ಅವನು ನಿಮಗೆ ಭೂಮಿಯಲ್ಲಿ ವಾಸ್ತವ್ಯವನ್ನು ಮಾಡಿಕೊಟ್ಟನು. ನೀವು ಭೂಮಿಯ ಸಮತಟ್ಟು ಪ್ರದೇಶಗಳಲ್ಲಿ ಸೌಧಗಳನ್ನು ನಿರ್ಮಿಸುತ್ತೀರಿ ಮತ್ತು ಬೆಟ್ಟಗಳಲ್ಲಿ ಮನೆಗಳನ್ನು ಕೊರೆಯುತ್ತೀರಿ. ಅಲ್ಲಾಹನ ಅನುಗ್ರಹಗಳನ್ನು ಸ್ಮರಿಸಿರಿ. ಭೂಮಿಯಲ್ಲಿ ಕಿಡಿಗೇಡಿತನ ಮಾಡುತ್ತಾ ಅಲ್ಲಾಹನ ಆಜ್ಞೋಲ್ಲಂಘನೆ ಮಾಡಬೇಡಿ.”
ಅವರ ಜನರಲ್ಲಿದ್ದ ಅಹಂಕಾರಿಗಳಾದ ಮುಖಂಡರು ಸ್ವಾಲಿಹರಲ್ಲಿ ವಿಶ್ವಾಸವಿಟ್ಟ ಬಲಹೀನರೊಡನೆ ಹೇಳಿದರು: “ಸ್ವಾಲಿಹರನ್ನು ಅವರ ಪರಿಪಾಲಕನ (ಅಲ್ಲಾಹನ) ಬಳಿಯಿಂದ ಕಳುಹಿಸಲಾಗಿದೆಯೆಂದು ನೀವು ನಿಜವಾಗಿಯೂ ನಂಬುತ್ತೀರಾ?” ಅವರು ಉತ್ತರಿಸಿದರು: “ಅವರೊಡನೆ ಏನು ಕಳುಹಿಸಲಾಗಿದೆಯೋ ಅದರಲ್ಲಿ ನಿಶ್ಚಯವಾಗಿಯೂ ನಾವು ವಿಶ್ವಾಸವಿಟ್ಟಿದ್ದೇವೆ.”
ನಂತರ ಅವರು ಆ ಒಂಟೆಯನ್ನು ಕೊಂದು ಅವರ ಪರಿಪಾಲಕನ (ಅಲ್ಲಾಹನ) ಆಜ್ಞೆಯನ್ನು ಉಲ್ಲಂಘಿಸಿದರು. ಅವರು ಹೇಳಿದರು: “ಓ ಸ್ವಾಲಿಹ್! ನೀನು ನಮ್ಮನ್ನು ಹೆದರಿಸುತ್ತಿದ್ದ ಆ ಶಿಕ್ಷೆಯನ್ನು ತಂದು ತೋರಿಸು. ನೀನು (ನಿಜವಾಗಿಯೂ) ಸಂದೇಶವಾಹಕನಾಗಿದ್ದರೆ.”
ಅವರಿಂದ ತಿರುಗಿ ನಡೆಯುತ್ತಾ ಸ್ವಾಲಿಹ್ ಹೇಳಿದರು: “ಓ ನನ್ನ ಜನರೇ! ನಿಶ್ಚಯವಾಗಿಯೂ ನಾನು ನನ್ನ ಪರಿಪಾಲಕನ (ಅಲ್ಲಾಹನ) ಸಂದೇಶವನ್ನು ನಿಮಗೆ ತಲುಪಿಸಿದ್ದೇನೆ ಮತ್ತು ನಿಮಗೆ ಪ್ರಾಮಾಣಿಕವಾಗಿ ಉಪದೇಶ ಮಾಡಿದ್ದೇನೆ. ಆದರೆ ನೀವು ಉಪದೇಶ ಮಾಡುವವರನ್ನು ಇಷ್ಟಪಡುತ್ತಿರಲಿಲ್ಲ.”