ಅಲ್ಲಾಹು ಹೇಳುವನು: “ನಿಮಗಿಂತ ಮೊದಲು ತೀರಿಹೋದ ಜಿನ್ನ್ ಮತ್ತು ಮನುಷ್ಯರ ಸಮುದಾಯಗಳೊಂದಿಗೆ ನೀವು ಕೂಡ ನರಕವನ್ನು ಪ್ರವೇಶಿಸಿರಿ.” ಒಂದೊಂದು ಸಮುದಾಯದವರು ಅದನ್ನು ಪ್ರವೇಶಿಸುವಾಗಲೆಲ್ಲಾ ಅವರಿಗಿಂತ ಮೊದಲಿನ ಸಮುದಾಯವನ್ನು ಶಪಿಸುವರು. ಎಲ್ಲಿಯವರೆಗೆಂದರೆ, ಅವರೆಲ್ಲರೂ ಅಲ್ಲಿ ಒಟ್ಟು ಸೇರಿದಾಗ ನಂತರ ಬಂದವರು ಮೊದಲು ಬಂದವರ ಬಗ್ಗೆ ಹೇಳುವರು: “ಓ ನಮ್ಮ ಪರಿಪಾಲಕನೇ! ಇವರೇ ನಮ್ಮನ್ನು ದಾರಿ ತಪ್ಪಿಸಿದವರು. ಆದ್ದರಿಂದ ಇವರಿಗೆ ನರಕದ ಇಮ್ಮಡಿ ಶಿಕ್ಷೆಯನ್ನು ನೀಡು.” ಅಲ್ಲಾಹು ಹೇಳುವನು: “ಎಲ್ಲರಿಗೂ ಇಮ್ಮಡಿ ಶಿಕ್ಷೆಯಿದೆ. ಆದರೆ ನೀವು ತಿಳಿಯುವುದಿಲ್ಲ.”
ಮೊದಲು ಬಂದವರು ನಂತರ ಬಂದವರೊಡನೆ ಹೇಳುವರು: “ನಿಮಗೆ ನಮಗಿಂತಲೂ ದೊಡ್ಡ ಶ್ರೇಷ್ಠತೆಯೇನಿಲ್ಲ (ನಾವೆಲ್ಲರೂ ಸಮಾನರು). ಆದ್ದರಿಂದ ನೀವು ಮಾಡುತ್ತಿದ್ದ ದುಷ್ಕರ್ಮಗಳ ಶಿಕ್ಷೆಯನ್ನು ನೀವೇ ಅನುಭವಿಸಿರಿ.”
ನಮ್ಮ ದೃಷ್ಟಾಂತಗಳನ್ನು ನಿಷೇಧಿಸಿದವರು ಮತ್ತು ಅವುಗಳ ಬಗ್ಗೆ ಅಹಂಕಾರ ತೋರಿದವರು ಯಾರೋ—ಅವರಿಗೆ ಆಕಾಶದ ಬಾಗಿಲುಗಳನ್ನು ತೆರೆದುಕೊಡಲಾಗುವುದಿಲ್ಲ.[1] ಸೂಜಿಯ ರಂಧ್ರದಲ್ಲಿ ಒಂಟೆ ಪ್ರವೇಶ ಮಾಡುವ ತನಕ ಅವರು ಸ್ವರ್ಗವನ್ನು ಪ್ರವೇಶಿಸುವುದಿಲ್ಲ. ಈ ರೀತಿ ನಾವು ಅಪರಾಧಿಗಳಿಗೆ ಪ್ರತಿಫಲ ನೀಡುವೆವು.
[1] ಅಂದರೆ ಅವರ ಆತ್ಮಗಳು, ಅಥವಾ ಅವರು ಮಾಡಿದ ಕರ್ಮಗಳು, ಅಥವಾ ಅವರ ಪ್ರಾರ್ಥನೆಗಳಿಗೆ ಆಕಾಶದ ಬಾಗಿಲುಗಳು ತೆರೆಯುವುದಿಲ್ಲ (ಸ್ವೀಕಾರವಾಗುವುದಿಲ್ಲ) ಎಂದರ್ಥ.
ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಒಬ್ಬ ವ್ಯಕ್ತಿಯ ಮೇಲೆ ಅವನ ಸಾಮರ್ಥ್ಯಕ್ಕೆ ಮಿಗಿಲಾದುದನ್ನು ನಾವು ಹೊರಿಸುವುದಿಲ್ಲ. ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
ನಾವು ಅವರ ಹೃದಯಗಳಲ್ಲಿರುವ ದ್ವೇಷವನ್ನು ತೆಗೆದು ಬಿಡುವೆವು. ಅವರ ತಳಭಾಗದಿಂದ ನದಿಗಳು ಹರಿಯುವುವು. ಅವರು ಹೇಳುವರು: “ಇದರ ಕಡೆಗೆ ನಮಗೆ ದಾರಿ ತೋರಿಸಿದ ಅಲ್ಲಾಹನಿಗೆ ಸರ್ವಸ್ತುತಿ. ಅಲ್ಲಾಹು ನಮಗೆ ದಾರಿ ತೋರಿಸದಿದ್ದರೆ ನಾವು ಸನ್ಮಾರ್ಗದಲ್ಲಿರುತ್ತಿರಲಿಲ್ಲ. ನಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಸಂದೇಶವಾಹಕರು ಸತ್ಯದೊಂದಿಗೇ ಬಂದಿದ್ದರು.” ಆಗ ಅವರೊಡನೆ ಹೇಳಲಾಗುವುದು: “ನೀವು ಮಾಡಿದ ಕರ್ಮಗಳಿಗೆ ಪ್ರತಿಫಲವಾಗಿ ಈ ಸ್ವರ್ಗವನ್ನು ನೀವು ಉತ್ತರಾಧಿಕಾರವಾಗಿ ಪಡೆದಿರುವಿರಿ.”