ಊರುಗಳ ನಿವಾಸಿಗಳು ಸತ್ಯವಿಶ್ವಾಸಿಗಳು ಮತ್ತು ದೇವಭಯವುಳ್ಳವರಾಗಿದ್ದರೆ, ನಾವು ಅವರಿಗೆ ಆಕಾಶದಿಂದ ಮತ್ತು ಭೂಮಿಯಿಂದ ಸಮೃದ್ಧಿಗಳನ್ನು ತೆರೆದುಕೊಡುತ್ತಿದ್ದೆವು. ಆದರೆ ಅವರು ಸತ್ಯನಿಷೇಧಿಗಳಾದರು. ಆದ್ದರಿಂದ ಅವರು ಮಾಡಿದ ದುಷ್ಕರ್ಮಗಳಿಂದಾಗಿ ನಾವು ಅವರನ್ನು ಹಿಡಿದೆವು.
ಭೂಮಿಯಲ್ಲಿ ವಾಸವಾಗಿದ್ದವರು (ನಾಶವಾದ) ಬಳಿಕ ಅದರ ಉತ್ತರಾಧಿಕಾರಿಗಳಾಗಿ ಬಂದವರಿಗೆ—ನಾವು ಇಚ್ಛಿಸಿದರೆ ಅವರ ಪಾಪಗಳ ನಿಮಿತ್ತ ಅವರನ್ನು ಶಿಕ್ಷಿಸುವೆವು ಎಂಬ ಪ್ರಜ್ಞೆಯು ಸರಿದಾರಿಯನ್ನೇಕೆ ತೋರಿಸಲಿಲ್ಲ? ನಾವು ಅವರ ಹೃದಯಗಳಿಗೆ ಮೊಹರು ಹಾಕುವೆವು. ಆದ್ದರಿಂದ ಯಾವುದಕ್ಕೂ ಕಿವಿಗೊಡಲು ಅವರಿಗೆ ಸಾಧ್ಯವಾಗುವುದಿಲ್ಲ.
ಆ ಊರುಗಳ ಕೆಲವು ಸಮಾಚಾರಗಳನ್ನು ನಾವು ನಿಮಗೆ ವಿವರಿಸಿಕೊಡುವೆವು. ಅವರ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೂ ಅವರು ಮೊದಲು ಏನನ್ನು ನಿಷೇಧಿಸಿದ್ದರೋ ಅದರಲ್ಲಿ ಅವರು ವಿಶ್ವಾಸವಿಡಲಿಲ್ಲ. ಈ ರೀತಿ ಅಲ್ಲಾಹು ಸತ್ಯನಿಷೇಧಿಗಳ ಹೃದಯಗಳಿಗೆ ಮೊಹರು ಹಾಕುತ್ತಾನೆ.
ನಂತರ ಅವರ ಬಳಿಕ ನಾವು ಮೂಸಾರನ್ನು ಫರೋಹ ಮತ್ತು ಅವನ ಜನರ ಬಳಿಗೆ ನಮ್ಮ ದೃಷ್ಟಾಂತಗಳೊಂದಿಗೆ ಕಳುಹಿಸಿದೆವು. ಆದರೆ ಅವರು ಅನ್ಯಾಯವಾಗಿ ಆ ದೃಷ್ಟಾಂತಗಳನ್ನು ನಿಷೇಧಿಸಿದರು. ಆ ಕಿಡಿಗೇಡಿಗಳ ಅಂತ್ಯವು ಹೇಗಿತ್ತೆಂದು ನೋಡಿ.