ಮೂಸಾ ತಮ್ಮ ಜನರಲ್ಲಿ ಸೇರಿದ ಎಪ್ಪತ್ತು ಪುರುಷರನ್ನು ನಮ್ಮ ನಿಶ್ಚಿತ ಸಮಯಕ್ಕಾಗಿ ಆರಿಸಿದರು. ಆದರೆ ಭೀಕರ ಕಂಪನವು ಅವರನ್ನು ಹಿಡಿದಾಗ ಮೂಸಾ ಹೇಳಿದರು: “ಓ ನನ್ನ ಪರಿಪಾಲಕನೇ! ನೀನು ಇಚ್ಛಿಸಿದರೆ ಇದಕ್ಕಿಂತ ಮೊದಲೇ ಅವರನ್ನು ಮತ್ತು ನನ್ನನ್ನು ನಾಶ ಮಾಡಬಹುದಿತ್ತು. ನಮ್ಮಲ್ಲಿನ ಅವಿವೇಕಿಗಳು ಮಾಡಿದ ಕೃತ್ಯಕ್ಕೆ ನೀನು ನಮ್ಮನ್ನು ನಾಶ ಮಾಡುವೆಯಾ? ಇದು ನಿನ್ನ ಪರೀಕ್ಷೆಯಾಗಿದೆ. ಇದರ ಮೂಲಕ ನೀನು ಇಚ್ಛಿಸುವವರನ್ನು ನೀನು ದಾರಿತಪ್ಪಿಸುತ್ತೀ ಮತ್ತು ನೀನು ಇಚ್ಛಿಸುವವರಿಗೆ ಸನ್ಮಾರ್ಗ ತೋರಿಸುತ್ತೀ. ನೀನೇ ನಮ್ಮ ರಕ್ಷಕ. ನಮ್ಮನ್ನು ಕ್ಷಮಿಸು ಮತ್ತು ನಮಗೆ ದಯೆ ತೋರು. ನೀನು ಕ್ಷಮಿಸುವವರಲ್ಲಿ ಅತ್ಯುತ್ತಮನಾಗಿರುವೆ.