ಮೂಸಾ ತಮ್ಮ ಜನರ ಬಳಿಗೆ ಮರಳಿ ಬಂದಾಗ—ಅವರು ಕೋಪ ಮತ್ತು ಬೇಸರದಿಂದ ಹೇಳಿದರು: “ನನ್ನ ನಿರ್ಗಮನದ ಬಳಿಕ ನೀವು ಮಾಡಿದ ಕೃತ್ಯವು ಅತ್ಯಂತ ಹೇಯವಾಗಿದೆ. ನಿಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆ ಬರುವುದಕ್ಕೆ ಮೊದಲೇ ನೀವು ಅವಸರಪಟ್ಟಿರಾ?” ಅವರು ಹಲಗೆಗಳನ್ನು ಎಸೆದು ಸಹೋದರನ ತಲೆಗೂದಲನ್ನು ಹಿಡಿದು ಎಳೆದರು. ಅವರು (ಸಹೋದರ) ಹೇಳಿದರು: “ನನ್ನ ತಾಯಿಯ ಮಗನೇ! ನಿಶ್ಚಯವಾಗಿಯೂ ಈ ಜನರು ನನ್ನನ್ನು ದುರ್ಬಲನೆಂದು ಪರಿಗಣಿಸಿದರು. ಅವರು ನನ್ನನ್ನು ಇನ್ನೇನು ಕೊಲ್ಲುವುದರಲ್ಲಿದ್ದರು. ನನ್ನ ಮೇಲೆ ಹಲ್ಲೆ ಮಾಡಿ ವೈರಿಗಳಿಗೆ ಸಂತಸವಾಗುವಂತೆ ಮಾಡಬೇಡ. ಅಕ್ರಮಿಗಳ ಸಾಲಿಗೆ ನನ್ನನ್ನು ಕೂಡ ಸೇರಿಸಿ ಬಿಡಬೇಡ.”