ನೀನು ನಮ್ಮ ಕೆಲವು ದೇವರುಗಳ ಕೆಟ್ಟ ವಶೀಕರಣಕ್ಕೆ ಒಳಗಾಗಿದ್ದೀಯಾ ಎಂದು ಮಾತ್ರ ನಮಗೆ ಹೇಳಲಿಕ್ಕಿರುವುದು.” ಹೂದ್ ಹೇಳಿದರು: “ನೀವು (ಅಲ್ಲಾಹನೊಂದಿಗೆ) ಸಹಭಾಗಿಯಾಗಿ ಮಾಡುತ್ತಿರುವ ಎಲ್ಲಾ ದೇವರುಗಳಿಂದಲೂ ನಾನು ಸಂಪೂರ್ಣ ದೂರವಾಗಿದ್ದೇನೆಂದು ಅಲ್ಲಾಹನನ್ನು ಸಾಕ್ಷಿಯಾಗಿಟ್ಟು ಹೇಳುತ್ತೇನೆ. ನೀವೂ ಅದಕ್ಕೆ ಸಾಕ್ಷಿಗಳಾಗಿರಿ.
ನಾನು ನನ್ನ ಮತ್ತು ನಿಮ್ಮ ಪರಿಪಾಲಕನಾದ ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇನೆ. ಎಲ್ಲಾ ಜೀವರಾಶಿಗಳ ಮಂದಲೆಯು ಅವನ ಹಿಡಿತದಲ್ಲಿದೆ. ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ಸರಿಯಾದ ಮಾರ್ಗದಲ್ಲಿದ್ದಾನೆ.
ನೀವು ವಿಮುಖರಾಗುವುದಾದರೆ, ನಾನಂತೂ ನಿಮಗೆ ತಲುಪಿಸಬೇಕೆಂದು ಕಳುಹಿಸಲಾದ ಸಂದೇಶಗಳನ್ನು ನಿಮಗೆ ತಲುಪಿಸಿದ್ದೇನೆ. ನನ್ನ ಪರಿಪಾಲಕನು (ಅಲ್ಲಾಹು) ನಿಮ್ಮ ಹೊರತಾದ ಬೇರೆ ಜನರನ್ನು ಉತ್ತರಾಧಿಕಾರಿಗಳಾಗಿ ತರುವನು. ಅವನಿಗೆ ಯಾವುದೇ ತೊಂದರೆ ಮಾಡಲು ನಿಮಗೆ ಸಾಧ್ಯವಿಲ್ಲ. ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ಎಲ್ಲಾ ವಸ್ತುಗಳ ಸಂರಕ್ಷಕನಾಗಿದ್ದಾನೆ.”
ಅವರೇ ಆದ್ ಗೋತ್ರದವರು. ಅವರು ಅವರ ಪರಿಪಾಲಕನ (ಅಲ್ಲಾಹನ) ವಚನಗಳನ್ನು ತಿರಸ್ಕರಿಸಿದರು, ಅವನ ಸಂದೇಶವಾಹಕರನ್ನು ನಿಷೇಧಿಸಿದರು ಮತ್ತು ಎಲ್ಲಾ ದುಷ್ಟ ಸ್ವೇಚ್ಛಾಚಾರಿಗಳನ್ನು ಹಿಂಬಾಲಿಸಿದರು.
ನಾವು ಸಮೂದ್ ಗೋತ್ರದವರ ಬಳಿಗೆ ಅವರ ಸಹೋದರ ಸ್ವಾಲಿಹರನ್ನು ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಅರಾಧಿಸಲು ಅರ್ಹರಾದ ಬೇರೆ ದೇವರಿಲ್ಲ. ಅವನು ನಿಮ್ಮನ್ನು ಭೂಮಿಯಿಂದ ಸೃಷ್ಟಿಸಿದನು ಮತ್ತು ಅಲ್ಲೇ ನಿಮಗೆ ವಾಸ್ತವ್ಯವನ್ನು ಮಾಡಿಕೊಟ್ಟನು. ಆದ್ದರಿಂದ ಅವನಲ್ಲಿ ಕ್ಷಮೆಯಾಚಿಸಿರಿ. ನಂತರ ಅವನ ಕಡೆಗೆ ಪಶ್ಚಾತ್ತಾಪದಿಂದ ತಿರುಗಿರಿ. ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ಬಹಳ ಸಮೀಪದಲ್ಲಿರುವವನು ಮತ್ತು (ಪ್ರಾರ್ಥನೆಗೆ) ಉತ್ತರ ನೀಡುವವನಾಗಿದ್ದಾನೆ.”
ಅವರು ಹೇಳಿದರು: “ಓ ಸ್ವಾಲಿಹ್! ಇದಕ್ಕೆ ಮುಂಚೆ ನಾವು ನಿನ್ನಲ್ಲಿ ಬಹಳಷ್ಟು ನಿರೀಕ್ಷೆಗಳನ್ನಿಟ್ಟಿದ್ದೆವು. ನಮ್ಮ ಪೂರ್ವಜರು ಆರಾಧಿಸಿದ್ದನ್ನು ಆರಾಧಿಸಬಾರದೆಂದು ನೀನು ನಮಗೆ ಹೇಳುತ್ತಿರುವೆಯಾ? ನೀನು ನಮ್ಮನ್ನು ಯಾವ ಧರ್ಮದ ಕಡೆಗೆ ಕರೆಯುತ್ತಿರುವೆಯೋ ಅದರ ಬಗ್ಗೆ ನಮಗೆ ಗೊಂದಲಪೂರ್ಣ ಸಂಶಯಗಳಿವೆ.”