ನಾವು ಮದ್ಯನ್ ಗೋತ್ರದವರ ಬಳಿಗೆ ಅವರ ಸಹೋದರ ಶುಐಬರನ್ನು ಕಳುಹಿಸಿದೆವು. ಅವರು ಹೇಳಿದರು: “ಓ ನನ್ನ ಜನರೇ! ನೀವು ಅಲ್ಲಾಹನನ್ನು ಆರಾಧಿಸಿರಿ. ಅವನ ಹೊರತು ನಿಮಗೆ ಆರಾಧಿಸಲು ಅರ್ಹರಾದ ಬೇರೆ ದೇವರಿಲ್ಲ. ಅಳತೆ ಮತ್ತು ತೂಕ ಮಾಡುವಾಗ ಕಡಿಮೆ ಮಾಡಬೇಡಿ. ನಿಶ್ಚಯವಾಗಿಯೂ ನೀವು ಸಮೃದ್ಧ ಸ್ಥಿತಿಯಲ್ಲಿರುವುದನ್ನು ನಾನು ಕಾಣುತ್ತಿದ್ದೇನೆ. ಆದರೆ ಸಂಪೂರ್ಣವಾಗಿ ಆವರಿಸಿಕೊಳ್ಳುವ ಆ ದಿನದ ಶಿಕ್ಷೆಯು ನಿಮ್ಮ ಮೇಲೆರಗಬಹುದೆಂದು ನಿಶ್ಚಯವಾಗಿಯೂ ನನಗೆ ಭಯವಾಗುತ್ತಿದೆ.
ಅವರು ಹೇಳಿದರು: “ಓ ಶುಐಬ್! ನಾವು ನಮ್ಮ ಪೂರ್ವಿಕರು ಆರಾಧಿಸುತ್ತಾ ಬಂದಿರುವುದನ್ನು ತೊರೆಯಬೇಕೆಂದು ಅಥವಾ ನಮ್ಮ ಧನದಲ್ಲಿ ನಮಗಿಷ್ಟ ಬಂದಂತೆ ವ್ಯವಹರಿಸುವುದನ್ನು ಬಿಟ್ಟುಬಿಡಬೇಕೆಂದು ಹೇಳಲು ನಿನ್ನ ನಮಾಝ್ ನಿನಗೆ ಆದೇಶಿಸುತ್ತಿದೆಯೇ? ನೀನೊಬ್ಬ ದೊಡ್ಡ ಸೈರಣೆಯುಳ್ಳವನು ಮತ್ತು ನೀತಿವಂತನೇ ಸರಿ!”
ಶುಐಬ್ ಹೇಳಿದರು: “ಓ ನನ್ನ ಜನರೇ! ನೀವು ಆಲೋಚಿಸಿ ನೋಡಿದ್ದೀರಾ? ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಯ ಸ್ಪಷ್ಟ ಆಧಾರದ ಮೇಲೆ ನಿಂತಿರುವಾಗ ಮತ್ತು ಅವನು ನನಗೆ ಉತ್ತಮ ಜೀವನೋಪಾಯವನ್ನು ಒದಗಿಸಿರುವಾಗ (ಸತ್ಯವನ್ನು ಹೇಳದಿರಲು ನನ್ನಿಂದ ಹೇಗೆ ಸಾಧ್ಯ?) ನಾನು ನಿಮಗೆ ಏನನ್ನು ವಿರೋಧಿಸುತ್ತೇನೆೋ ಅದಕ್ಕೆ ವಿರುದ್ಧವಾಗಿ ಸಾಗಲು ನಾನು ಬಯಸುವುದಿಲ್ಲ. ನಾನು ನನಗೆ ಸಾಧ್ಯವಾದಷ್ಟು ಸುಧಾರಣೆ ಮಾಡಲು ಬಯಸುತ್ತೇನೆ. ಅಲ್ಲಾಹನ ಸಹಾಯದಿಂದ ಮಾತ್ರ ನಾನು ಯಶಸ್ವಿಯಾಗಬಲ್ಲೆ. ಅವನಲ್ಲಿಯೇ ನಾನು ಭರವಸೆಯಿಟ್ಟಿದ್ದೇನೆ ಮತ್ತು ಅವರ ಬಳಿಗೇ ನಾನು ಮರಳುತ್ತೇನೆ.