ಓ ನನ್ನ ಜನರೇ! ನನ್ನೊಂದಿಗೆ ನೀವು ತೋರುತ್ತಿರುವ ಈ ವಿರೋಧವು ನೂಹರ ಜನರಿಗೆ, ಹೂದರ ಜನರಿಗೆ ಅಥವಾ ಸ್ವಾಲಿಹರ ಜನರಿಗೆ ಸಂಭವಿಸಿದ ದುರಂತವು ನಿಮಗೂ ಸಂಭವಿಸುವಂತಾಗಲು ಪ್ರೇರಕವಾಗದಿರಲಿ. ಲೂತರ ಜನರಂತೂ ನಿಮ್ಮಿಂದ ಹೆಚ್ಚು ದೂರದಲ್ಲಿಲ್ಲ.
ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಿರಿ. ನಂತರ ಅವನ ಕಡೆಗೆ ಪಶ್ಚಾತ್ತಾಪದಿಂದ ತಿರುಗಿರಿ. ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ದಯೆ ತೋರುವವನು ಮತ್ತು ಅಕ್ಕರೆಯುಳ್ಳವನಾಗಿದ್ದಾನೆ.”
ಅವರು ಹೇಳಿದರು: “ಓ ಶುಐಬ್! ನೀನು ಹೇಳುವ ಮಾತುಗಳಲ್ಲಿ ಹೆಚ್ಚಿನದ್ದನ್ನು ಅರ್ಥಮಾಡಿಕೊಳ್ಳಲು ನಮಗೆ ಸಾಧ್ಯವಾಗುತ್ತಿಲ್ಲ. ನಿಶ್ಚಯವಾಗಿಯೂ ನೀನು ನಮ್ಮಲ್ಲಿ ಒಬ್ಬ ಬಲಹೀನ ವ್ಯಕ್ತಿಯಂತೆ ಕಾಣುತ್ತಿರುವೆ. ನಿನ್ನ ಗೋತ್ರದವರು ಇಲ್ಲದಿರುತ್ತಿದ್ದರೆ ನಾವು ನಿನ್ನನ್ನು ಕಲ್ಲೆಸೆದು ಕೊಲ್ಲುತ್ತಿದ್ದೆವು. ನಾವು ನಿನ್ನನ್ನು ಗೌರವಾರ್ಹ ವ್ಯಕ್ತಿಯೆಂದು ಪರಿಗಣಿಸುವುದಿಲ್ಲ.”
ಶುಐಬ್ ಹೇಳಿದರು: “ಓ ನನ್ನ ಜನರೇ! ನಿಮ್ಮ ದೃಷ್ಟಿಯಲ್ಲಿ ಅಲ್ಲಾಹನಿಗಿಂತಲೂ ನನ್ನ ಗೋತ್ರದವರೇ ಹೆಚ್ಚು ಗೌರವಾನ್ವಿತರೇ? ನೀವಂತೂ ಅವನನ್ನು ನಿಮ್ಮ ಬೆನ್ನ ಹಿಂಭಾಗಕ್ಕೆ ಎಸೆದಿದ್ದೀರಿ. ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ನೀವು ಮಾಡುವ ಕರ್ಮಗಳನ್ನು ಆವರಿಸಿದ್ದಾನೆ.
ಓ ನನ್ನ ಜನರೇ! ನೀವು ನಿಮ್ಮ ಸ್ಥಾನದಲ್ಲಿ ಕರ್ಮವೆಸಗಿರಿ. ನಾನೂ ಕರ್ಮವೆಸಗುತ್ತೇನೆ. ಅವಮಾನಗೊಳಿಸುವ ಶಿಕ್ಷೆಯು ಯಾರಿಗೆ ಬರಲಿದೆ ಮತ್ತು ಯಾರು ಸುಳ್ಳು ಹೇಳುವವರು ಎಂದು ಸದ್ಯವೇ ನೀವು ತಿಳಿಯುವಿರಿ. ನೀವು ಕಾಯಿರಿ. ನಾನೂ ಕೂಡ ನಿಮ್ಮೊಂದಿಗೆ ಕಾಯುತ್ತೇನೆ.”
ನಮ್ಮ ಆಜ್ಞೆಯು ಬಂದಾಗ, ನಾವು ನಮ್ಮ ದಯೆಯಿಂದ ಶುಐಬರನ್ನು ಮತ್ತು ಅವರ ಜೊತೆಯಲ್ಲಿದ್ದ ಸತ್ಯವಿಶ್ವಾಸಿಗಳನ್ನು ರಕ್ಷಿಸಿದೆವು. ಆ ಅಕ್ರಮಿಗಳನ್ನು ಮಹಾ ಚೀತ್ಕಾರವು ಹಿಡಿದುಬಿಟ್ಟಿತು. ಅವರು ತಮ್ಮ ಮನೆಗಳಲ್ಲಿಯೇ ಬೋರಲು ಬಿದ್ದು ಸತ್ತರು.
ಅವರು ಅಲ್ಲಿ ವಾಸಿಸಲೇ ಇಲ್ಲ ಎಂಬಂತೆ ನಾಶವಾದರು. ತಿಳಿಯಿರಿ! ನಿಶ್ಚಯವಾಗಿಯೂ ಸಮೂದ್ ಗೋತ್ರದವರು (ಅಲ್ಲಾಹನ ದಯೆಯಿಂದ) ದೂರವಾದಂತೆ ಮದ್ಯನ್ ಗೋತ್ರದವರೂ (ಅಲ್ಲಾಹನ ದಯೆಯಿಂದ) ದೂರವಾದರು.