ನೂಹ್ ನಾವೆಯನ್ನು ನಿರ್ಮಿಸುತ್ತಿದ್ದರು. ಅವರ ಜನರ ಮುಖಂಡರು ಅವರ ಬಳಿಯಿಂದ ಹಾದು ಹೋಗುವಾಗಲೆಲ್ಲಾ ಅವರನ್ನು ತಮಾಷೆ ಮಾಡುತ್ತಿದ್ದರು. ನೂಹ್ ಹೇಳಿದರು: “ನೀವು ನಮ್ಮನ್ನು ತಮಾಷೆ ಮಾಡುತ್ತೀರಲ್ಲವೇ? ನಿಶ್ಚಯವಾಗಿಯೂ ನೀವು ತಮಾಷೆ ಮಾಡಿದಂತೆಯೇ ನಾವು ಕೂಡ ನಿಮ್ಮನ್ನು ತಮಾಷೆ ಮಾಡುವೆವು.
ಎಲ್ಲಿಯವರೆಗೆಂದರೆ, ನಮ್ಮ ಆಜ್ಞೆಯು ಬಂದು ಒಲೆ ಉಕ್ಕಿ ಹರಿದಾಗ, ನಾವು ಹೇಳಿದೆವು: “ಎಲ್ಲಾ ಜೀವಿಗಳ ಒಂದೊಂದು ಜೋಡಿಯನ್ನು (ಗಂಡು ಮತ್ತು ಹೆಣ್ಣು) ನಾವೆಯಲ್ಲಿ ಹತ್ತಿಸಿರಿ. ನಿಮ್ಮ ಕುಟುಂಬದವರಲ್ಲಿ ಯಾರ ಮೇಲೆ ಅಲ್ಲಾಹನ ಮಾತು ಖಾತ್ರಿಯಾಗಿದೆಯೋ ಅವರನ್ನು ಬಿಟ್ಟು ಉಳಿದವರನ್ನು ಹಾಗೂ ಸತ್ಯವಿಶ್ವಾಸಿಗಳನ್ನು ಕೂಡ ಹತ್ತಿಸಿರಿ.” ಕೆಲವು ಬೆರಳೆಣಿಕೆಯ ಜನರು ಮಾತ್ರ ಅವರ ಜೊತೆಗೆ ವಿಶ್ವಾಸವಿಟ್ಟಿದ್ದರು.
ನೂಹ್ ಹೇಳಿದರು: “ಈ ನಾವೆಯನ್ನು ಹತ್ತಿಕೊಳ್ಳಿ. ಇದು ಚಲಿಸುವುದು ಮತ್ತು ನಿಲ್ಲುವುದೆಲ್ಲವೂ ಅಲ್ಲಾಹನ ಹೆಸರಲ್ಲಿ. ನಿಶ್ಚಯವಾಗಿಯೂ ನನ್ನ ಪರಿಪಾಲಕನು (ಅಲ್ಲಾಹು) ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.”
ನಾವೆ ಅವರನ್ನು ಹೊತ್ತು ಬೆಟ್ಟಗಳಂತಿರುವ ಹೆದ್ದೆರೆಗಳ ಮಧ್ಯೆ ಚಲಿಸುತ್ತಿತ್ತು. ದೂರದ ಸ್ಥಳದಲ್ಲಿ ನಿಂತಿದ್ದ ಮಗನನ್ನು ಕರೆದು ನೂಹ್ ಹೇಳಿದರು: “ಓ ನನ್ನ ಮುದ್ದು ಕಂದಾ! ನಮ್ಮೊಂದಿಗೆ ಹತ್ತಿಕೋ. ನೀನು ಸತ್ಯನಿಷೇಧಿಗಳಲ್ಲಿ ಸೇರಬೇಡ.”
ಅವನು ಹೇಳಿದನು: “ನಾನೊಂದು ಬೆಟ್ಟದಲ್ಲಿ ಆಶ್ರಯ ಪಡೆಯುವೆನು. ಅದು ನನ್ನನ್ನು ಪ್ರವಾಹದಿಂದ ರಕ್ಷಿಸುತ್ತದೆ.” ನೂಹ್ ಹೇಳಿದರು: “ಇಂದು ಅಲ್ಲಾಹನ ಆಜ್ಞೆಯಿಂದ ಪಾರು ಮಾಡುವವರು ಯಾರೂ ಇಲ್ಲ. ಯಾರಿಗೆ ಅಲ್ಲಾಹು ದಯೆ ತೋರುತ್ತಾನೋ ಅವರು ಮಾತ್ರ ಪಾರಾಗುತ್ತಾರೆ.” ಆಗ ಅವರಿಬ್ಬರ ಮಧ್ಯೆ ಹೆದ್ದೆರೆಯು ಅಡ್ಡವಾಗಿ ಎದ್ದು, ಅವನು ಮುಳುಗಿ ನಾಶವಾದವರಲ್ಲಿ ಸೇರಿದನು.
“ಓ ಭೂಮಿ! ನಿನ್ನ ನೀರನ್ನು ನುಂಗಿಬಿಡು! ಓ ಆಕಾಶ! ಮಳೆ ಸುರಿಸುವುದನ್ನು ನಿಲ್ಲಿಸು!” ಎಂದು ಆಜ್ಞಾಪಿಸಲಾಯಿತು. ಪ್ರವಾಹವು ತಗ್ಗಿತು ಮತ್ತು ಆಜ್ಞೆಯು ನೆರವೇರಿತು. ನಾವೆ ಜೂದಿ ಪರ್ವತದ ಮೇಲೆ ನಿಂತಿತು. “ಅಕ್ರಮವೆಸಗಿದ ಜನರು ನಾಶವಾಗಲಿ” ಎಂದು ಹೇಳಲಾಯಿತು.
ನೂಹ್ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಹೇಳಿದರು: “ಓ ನನ್ನ ಪರಿಪಾಲಕನೇ! ನನ್ನ ಮಗ ನನ್ನ ಕುಟುಂಬದವನು. ನಿಶ್ಚಯವಾಗಿಯೂ ನಿನ್ನ ವಾಗ್ದಾನವು ಸತ್ಯವಾಗಿದೆ. ನೀನು ತೀರ್ಪು ನೀಡುವವರಲ್ಲೇ ಅತಿಶ್ರೇಷ್ಠ ತೀರ್ಪುಗಾರನಾಗಿರುವೆ.”