ಅವರು (ಹೆಂಡತಿ) ಹೇಳಿದರು: “ಓ ನನ್ನ ದುರದೃಷ್ಟವೇ! ನಾನು ಮಗುವಿಗೆ ಜನ್ಮ ನೀಡುವುದು ಸಾಧ್ಯವೇ? ನಾನೊಬ್ಬ ವೃದ್ಧೆ. ಈ ನನ್ನ ಗಂಡ ಕೂಡ ಒಬ್ಬ ಮುದುಕ! ನಿಶ್ಚಯವಾಗಿಯೂ ಇದೊಂದು ವಿಚಿತ್ರ ಸಂಗತಿಯಾಗಿದೆ!”
ಅವರು (ದೂತರು) ಹೇಳಿದರು: “ಅಲ್ಲಾಹನ ಆಜ್ಞೆಯ ಬಗ್ಗೆ ನಿಮಗೆ ಅಚ್ಚರಿಯೇ? ಓ ಮನೆಯವರೇ! ನಿಮ್ಮ ಮೇಲೆ ಅಲ್ಲಾಹನ ದಯೆ ಮತ್ತು ಸಮೃದ್ಧಿಯಿರಲಿ. ನಿಶ್ಚಯವಾಗಿಯೂ ಅವನು ಸ್ತುತ್ಯರ್ಹನು ಮತ್ತು ಮಹಾಮಹಿಮನಾಗಿದ್ದಾನೆ.”
(ದೂತರು ಹೇಳಿದರು): “ಓ ಇಬ್ರಾಹೀಮರೇ! ಈ ತರ್ಕವನ್ನು ಬಿಟ್ಟುಬಿಡಿ. ನಿಶ್ಚಯವಾಗಿಯೂ ನಿಮ್ಮ ಪರಿಪಾಲಕನ (ಅಲ್ಲಾಹನ) ಆಜ್ಞೆಯು ಬಂದಿದೆ. ನಿಶ್ಚಯವಾಗಿಯೂ ಅವರಿಗೆ ರದ್ದು ಮಾಡಲಾಗದ ಶಿಕ್ಷೆಯು ಬರಲಿದೆ.”
ನಮ್ಮ ದೂತರು ಲೂತರ ಬಳಿಗೆ ಬಂದಾಗ, ಅವರಿಗೆ ಅವರ (ದೂತರ) ಬಗ್ಗೆ ಕಳವಳವಾಯಿತು. ಅವರ ಹೃದಯದಲ್ಲಿ ಇಕ್ಕಟ್ಟು ಅನುಭವವಾಯಿತು. ಅವರು ಹೇಳಿದರು: “ಇದೊಂದು ಕಠಿಣ ಪರೀಕ್ಷೆಯ ದಿನವಾಗಿದೆ.”[1]
[1] ಲೂತರ (ಅವರ ಮೇಲೆ ಶಾಂತಿಯಿರಲಿ) ಜನರು ಸಲಿಂಗಕಾಮಿಗಳಾಗಿದ್ದರು. ದೇವದೂತರುಗಳು ಸ್ಫುರದ್ರೂಪಿ ಯುವಕರ ರೂಪದಲ್ಲಿ ಅಲ್ಲಿಗೆ ಬಂದಿದ್ದರು. ಇವರನ್ನು ಕಂಡಾಗ ಲೂತರಿಗೆ (ಅವರ ಮೇಲೆ ಶಾಂತಿಯಿರಲಿ) ಕಳವಳವಾಯಿತು. ಎಲ್ಲಿ ತನ್ನ ಜನರು ಇವರನ್ನು ದುರುಪಯೋಗಪಡಿಸುತ್ತಾರೋ ಎಂದು ಅವರಿಗೆ ಗಾಬರಿಯಾಯಿತು. ಅವರ ಹೃದಯ ಬಡಿತ ಹೆಚ್ಚಾಯಿತು.
ಅವರು ಜನರು ಅವರ ಬಳಿಗೆ ಓಡೋಡಿ ಬಂದರು. ಅವರು ಬಹಳ ಹಿಂದಿನಿಂದಲೇ ಕೆಟ್ಟ ಕೃತ್ಯಗಳನ್ನು ಮಾಡುತ್ತಾ ಬಂದಿದ್ದರು. ಲೂತ್ ಹೇಳಿದರು: “ಓ ನನ್ನ ಜನರೇ! ಇಗೋ ಇವರು ನನ್ನ ಹೆಣ್ಣುಮಕ್ಕಳು. ಇವರು ನಿಮಗೆ ಹೆಚ್ಚು ಪರಿಶುದ್ಧರು. ಅಲ್ಲಾಹನನ್ನು ಭಯಪಡಿರಿ. ನನ್ನ ಅತಿಥಿಗಳ ವಿಷಯದಲ್ಲಿ ನನ್ನನ್ನು ಅವಮಾನ ಮಾಡಬೇಡಿ. ನಿಮ್ಮಲ್ಲಿ ಕನಿಷ್ಠ ಒಬ್ಬ ನೀತಿವಂತ ವ್ಯಕ್ತಿಯೂ ಇಲ್ಲವೇ?”
ಅವರು (ದೂತರು) ಹೇಳಿದರು: “ಓ ಲೂತ್! ನಿಶ್ಚಯವಾಗಿಯೂ ನಾವು ನಿಮ್ಮ ಪರಿಪಾಲಕನ (ಅಲ್ಲಾಹನ) ದೂತರಾಗಿದ್ದೇವೆ. ನಿಮ್ಮ ಬಳಿಗೆ ತಲುಪಲು ಅವರಿಗೆ ಸಾಧ್ಯವಿಲ್ಲ. ಆದ್ದರಿಂದ ರಾತ್ರಿಯ ಒಂದು ಭಾಗದಲ್ಲಿ ನೀವು ನಿಮ್ಮ ಕುಟುಂಬ ಸಮೇತ ಇಲ್ಲಿಂದ ಹೊರಟುಹೋಗಿ. ನಿಮ್ಮಲ್ಲಿ ಯಾರೂ ಹಿಂದಿರುಗಿ ನೋಡದಿರಲಿ. ಆದರೆ ನಿಮ್ಮ ಪತ್ನಿಯನ್ನು ಕರೆದೊಯ್ಯಬೇಡಿ. ನಿಶ್ಚಯವಾಗಿಯೂ ಅವರಿಗೇನು ಸಂಭವಿಸುತ್ತದೋ ಅದು ಅವಳಿಗೂ ಸಂಭವಿಸುತ್ತದೆ. ನಿಶ್ಚಯವಾಗಿಯೂ ಅವರಿಗೆ ನೀಡಲಾದ ನಿಗದಿತ ಸಮಯವು ಪ್ರಭಾತವಾಗಿದೆ. ಪ್ರಭಾತವು ಹತ್ತಿರದಲ್ಲೇ ಇದೆಯಲ್ಲವೇ?”