ಇವರಿಗೆ ಭೂಮಿಯಲ್ಲಿ (ಅಲ್ಲಾಹನನ್ನು) ಸೋಲಿಸಲು ಸಾಧ್ಯವಿಲ್ಲ. ಅಲ್ಲಾಹನ ಹೊರತು ಅವರಿಗೆ ಬೇರೆ ರಕ್ಷಕರೂ ಇಲ್ಲ. ಅವರಿಗೆ ಇಮ್ಮಡಿ ಶಿಕ್ಷೆ ನೀಡಲಾಗುವುದು. ಇವರಿಗೆ ಕೇಳುವ ಶಕ್ತಿಯಿರಲಿಲ್ಲ ಮತ್ತು ಇವರು ನೋಡುತ್ತಲೂ ಇರಲಿಲ್ಲ.
ನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು, ಸತ್ಕರ್ಮವೆಸಗಿದವರು ಮತ್ತು ತಮ್ಮ ಪರಿಪಾಲಕನಿಗೆ (ಅಲ್ಲಾಹನಿಗೆ) ವಿನಮ್ರರಾಗಿರುವವರು ಯಾರೋ—ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
ಈ ಎರಡು ಪಂಗಡಗಳ (ಸತ್ಯವಿಶ್ವಾಸಿಗಳು ಮತ್ತು ಸತ್ಯನಿಷೇಧಿಗಳ) ಉದಾಹರಣೆಯು ಕಣ್ಣು ಕಾಣದವನು ಮತ್ತು ಕಿವಿ ಕೇಳದವನು ಹಾಗೂ ಕಣ್ಣು ಕಾಣುವವನು ಮತ್ತು ಕಿವಿ ಕೇಳುವವನಂತೆ. ಇವರಿಬ್ಬರೂ ಸಮಾನರಾಗುವರೇ? ಆದರೂ ನೀವು ಉಪದೇಶವನ್ನು ಸ್ವೀಕರಿಸುವುದಿಲ್ಲವೇ?
ಆಗ ಅವರ ಜನರಲ್ಲಿದ್ದ ಸತ್ಯನಿಷೇಧಿಗಳ ಮುಖಂಡರು ಹೇಳಿದರು: “ನೀನು ನಮಗೆ ನಮ್ಮಂತಿರುವ ಒಬ್ಬ ಮನುಷ್ಯನಂತೆ ಕಾಣುತ್ತಿರುವೆ. ನಮ್ಮಲ್ಲಿನ ಅತ್ಯಂತ ಕೆಳವರ್ಗದ ಜನರು ಮಾತ್ರ ನಿನ್ನನ್ನು ಹಿಂಬಾಲಿಸಿದ್ದಾರೆಂದು ನಮಗೆ ಕಾಣುತ್ತಿದೆ—ಅದೂ ಕೂಡ ಯಾವುದೇ ವಿವೇಚನೆಯಿಲ್ಲದೆ. ನಿನಗೆ ನಮ್ಮ ಮೇಲೆ ಯಾವುದೇ ಶ್ರೇಷ್ಠತೆಯಿರುವುದು ನಮಗೆ ಕಾಣಿಸುತ್ತಿಲ್ಲ. ಬದಲಿಗೆ, ನೀನೊಬ್ಬ ಸುಳ್ಳುಗಾರನೆಂದೇ ನಾವು ಭಾವಿಸುತ್ತಿದ್ದೇವೆ.”
ನೂಹ್ ಹೇಳಿದರು: “ಓ ನನ್ನ ಜನರೇ! ನೀವು ಆಲೋಚಿಸಿ ನೋಡಿದ್ದೀರಾ? ನಾನು ನನ್ನ ಪರಿಪಾಲಕನ (ಅಲ್ಲಾಹನ) ಕಡೆಯ ಒಂದು ಸ್ಪಷ್ಟ ಆಧಾರದ ಮೇಲೆ ನಿಂತಿದ್ದೇನೆ ಮತ್ತು ಅವನು ತನ್ನ ದಯೆಯನ್ನು (ಪ್ರವಾದಿತ್ವವನ್ನು) ನನಗೆ ದಯಪಾಲಿಸಿದ್ದಾನೆ. ಆದರೂ ಅದನ್ನು ನೋಡಲು ನಿಮಗೆ ಸಾಧ್ಯವಾಗದಿದ್ದರೆ ನಾವು ಅದನ್ನು ಬಲವಂತವಾಗಿ ನಿಮ್ಮ ಮೇಲೆ ಹೇರಬೇಕೇ? ನೀವು ಅದನ್ನು ಇಷ್ಟಪಡದವರಾಗಿದ್ದೂ ಸಹ.