ಭೂಮಿಯಲ್ಲಿರುವ ಎಲ್ಲಾ ಜೀವರಾಶಿಗಳಿಗೆ ಆಹಾರ ನೀಡುವ ಹೊಣೆ ಅಲ್ಲಾಹನದ್ದು. ಅವನು ಅವುಗಳ ವಾಸ್ತವ್ಯ ಸ್ಥಳವನ್ನು ಮತ್ತು ಅವುಗಳ ನಿಕ್ಷೇಪ ಸ್ಥಳವನ್ನು[1] ತಿಳಿಯುತ್ತಾನೆ. ಎಲ್ಲವೂ ಒಂದು ಸ್ಪಷ್ಟ ದಾಖಲೆಯಲ್ಲಿದೆ.
[1] ವಾಸ್ತವ್ಯ ಸ್ಥಳವೆಂದರೆ ತಾಯಿಯ ಗರ್ಭ ಮತ್ತು ನಿಕ್ಷೇಪಸ್ಥಳವೆಂದರೆ ತಂದೆಯ ಬೆನ್ನುಹುರಿ ಎಂದು ಹೇಳಲಾಗಿದೆ. ಇತರ ಕೆಲವು ವ್ಯಾಖ್ಯಾನಕಾರರ ಪ್ರಕಾರ ವಾಸ್ತವ್ಯ ಸ್ಥಳವೆಂದರೆ ಪ್ರಾಣಿಗಳು ಮತ್ತು ಮನುಷ್ಯರು ವಾಸಿಸುವ ಸ್ಥಳ ಮತ್ತು ನಿಕ್ಷೇಪಸ್ಥಳವೆಂದರೆ ಅವರು ಕೊನೆಯದಾಗಿ ಸೇರುವ ಸಮಾಧಿ ಇತ್ಯಾದಿ.
ಭೂಮ್ಯಾಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದವನು ಅವನೇ. ಅವನ ಸಿಂಹಾಸನವು ನೀರಿನ ಮೇಲಿತ್ತು. ನಿಮ್ಮಲ್ಲಿ ಯಾರು ಅತ್ಯುತ್ತಮವಾಗಿ ಕರ್ಮವೆಸಗುತ್ತಾರೆಂದು ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ. ನಿಶ್ಚಯವಾಗಿಯೂ ಮರಣಾನಂತರ ನಿಮ್ಮನ್ನು ಜೀವ ನೀಡಿ ಎಬ್ಬಿಸಲಾಗುವುದು ಎಂದು ನೀವು ಹೇಳಿದರೆ ಆ ಸತ್ಯನಿಷೇಧಿಗಳು ಹೇಳುತ್ತಾರೆ: “ಇದು ಸ್ಪಷ್ಟ ಮಾಟಗಾರಿಕೆಯಲ್ಲದೆ ಇನ್ನೇನೂ ಅಲ್ಲ.”
ನಾವು ಅವರ ಶಿಕ್ಷೆಯನ್ನು ಒಂದು ನಿಶ್ಚಿತ ಅವಧಿಯ ತನಕ ಮುಂದೂಡಿದರೆ, ಅವರು ಕೇಳುವರು: “ಅದಕ್ಕೆ ತಡೆಯಾದದ್ದು ಏನು?” ತಿಳಿಯಿರಿ! ಆ ಶಿಕ್ಷೆಯು ಅವರ ಬಳಿಗೆ ಬರುವ ದಿನ ಅದು ಅವರಿಗೆ ತಟ್ಟದಂತೆ ಅವರಿಂದ ತಿರುಗಿಸಿ ಬಿಡಲಾಗುವುದಿಲ್ಲ. ಯಾವುದನ್ನು ಅವರು ತಮಾಷೆ ಮಾಡುತ್ತಿದ್ದರೋ ಅದು ಅವರನ್ನು ಆವರಿಸಿ ಬಿಡುವುದು.
ಅವನಿಗೆ ಕಷ್ಟ ಬಂದ ನಂತರ ನಾವು ಅವನಿಗೆ ಸುಖದ ರುಚಿಯನ್ನು ತೋರಿಸಿದರೆ, ನಿಶ್ಚಯವಾಗಿಯೂ ಅವನು ಹೇಳುತ್ತಾನೆ: “ನನ್ನ ಕಷ್ಟಗಳೆಲ್ಲವೂ ಮುಗಿದವು.” ಅವನು ಹರ್ಷೋನ್ಮಾದಿತನು ಮತ್ತು ಬಡಾಯಿಕೋರನಾಗುವನು.
“ಇವನ ಮೇಲೆ ಒಂದು ನಿಧಿಯನ್ನೇಕೆ ಇಳಿಸಲಾಗಿಲ್ಲ? ಅಥವಾ ಇವನೊಡನೆ ಒಬ್ಬ ದೇವದೂತರೇಕೆ ಬರಲಿಲ್ಲ” ಎಂಬ ಅವರ ಮಾತುಗಳನ್ನು ಕೇಳಿ ನೀವು ನಿಮಗೆ ನೀಡಲಾದ ದೇವವಾಣಿಗಳಲ್ಲಿ ಕೆಲವನ್ನು ತ್ಯಜಿಸಲೂಬಹುದು ಮತ್ತು ಅದರಿಂದ ನಿಮ್ಮ ಹೃದಯದಲ್ಲಿ ಇಕ್ಕಟ್ಟು ಅನುಭವವಾಗಲೂಬಹುದು. ಆದರೆ ನೆನಪಿಡಿ! ನೀವು ಒಬ್ಬ ಮುನ್ನೆಚ್ಚರಿಕೆಗಾರ ಮಾತ್ರ. ಅಲ್ಲಾಹು ಎಲ್ಲಾ ವಿಷಯಗಳಿಗೂ ಹೊಣೆಗಾರನಾಗಿದ್ದಾನೆ.