ಮತ್ತು ನೂಹ್‌ರವರು ಹಡಗನ್ನು ನಿರ್ಮಿಸತೊಡಗಿದರು. ಅವರ ಮುಂದಿನಿAದ ಅವರ ಜನಾಂಗದ ಪ್ರಮುಖರು ಹಾದು ಹೋಗುವಾಗಲೆಲ್ಲ ಅವರನ್ನು ಅಪಹಾಸ್ಯ ಮಾಡುತ್ತಿದ್ದರು. ನೂಹ್‌ರವರು ಹೇಳುತ್ತಿದ್ದರು: ನೀವು ನಮ್ಮ ಅಪಹಾಸ್ಯ ಮಾಡುತ್ತಿದ್ದರೆ ನಾವು ಸಹ, ನೀವು ಅಪಹಾಸ್ಯ ಮಾಡುತ್ತಿದ್ದಂತೆ ನಿಮ್ಮ ಅಪಹಾಸ್ಯ ಮಾಡಲಿದ್ದೇವೆ.
ಕೊನೆಗೆ ನಮ್ಮ ಆಜ್ಞೆಯು ಬಂದಿತು ತಂದೂರಿ ಒಲೆಯಿಂದ ನೀರು ಉಕ್ಕಿದಾಗ ನಾವೆಂದೆವು ಹಡಗಿನಲ್ಲಿ ನೀವು ಪ್ರತಿಯೊಂದು ಜೀವಿಗಳಿಂದ ಎರಡು ವರ್ಗಗಳನ್ನು ಹತ್ತಿಸಿಕೊಳ್ಳಿ. ಆದರೆ ಯಾರ ವಿರುದ್ಧ ಮೊದಲೇ ತೀರ್ಮಾನವಾಗಿದೆಯೋ ಅವರ ಹೊರತು, ನಿಮ್ಮ ಕುಟುಂಬದವರನ್ನೂ ಮತ್ತು ಸರ್ವ ವಿಶ್ವಾಸಿಗಳನ್ನೂ ಹತ್ತಿಸಿಕೊಳ್ಳಿ ಅವರ ಜೊತೆ ವಿಶ್ವಾಸವಿರಿಸಿದವರು ಅತ್ಯಲ್ಪ ಮಂದಿಯೇ ಇದ್ದರು.
ನೂಹ್‌ರವರು ಹೇಳಿದರು : ನೀವೆಲ್ಲರೂ ಆ ಹಡಗಿನಲ್ಲಿ ಕುಳಿತುಕೊಳ್ಳಿರಿ. ಅದರ ಚಲನೆ ಮತ್ತು ನಿಲುಗಡೆ ಅಲ್ಲಾಹನ ನಾಮದಿಂದಲೇ ಆಗಿದೆ. ವಾಸ್ತವದಲ್ಲಿ ನನ್ನ ಪ್ರಭು ಮಹಾ ಕ್ಷಮಾಶೀಲನೂ ಕರುಣಾನಿಧಿಯೂ ಆಗಿದ್ದಾನೆ.
ಆ ಹಡಗು ಅವರನ್ನು ಹೊತ್ತುಕೊಂಡು ಬೆಟ್ಟಗಳಂತಿರುವ ಅಲೆಗಳಲ್ಲಿ ಸಂಚರಿಸತೊಡಗಿತು. ನೂಹ್‌ರವರು ಒಂದು ತೀರದಲ್ಲಿದ್ದ ತನ್ನ ಮಗನನ್ನು ಕೂಗಿ ಕರೆದರು. ಓ ನನ್ನ ಪ್ರಿಯ ಮಗನೇ, ನೀನು ನಮ್ಮೊಂದಿಗೆ ಹತ್ತಿಬಿಡು ಹಾಗೂ ಸತ್ಯನಿಷೇಧಿಗಳೊಂದಿಗೆ ಸೇರದಿರು.
ಅವನು ಉತ್ತರಿಸಿದನು ನಾನು ಸದ್ಯದಲ್ಲೆ ಒಂದು ಪರ್ವತದ ಮೇಲೆ ಆಶ್ರಯ ಪಡೆಯುವೆನು. ಅದು ನನ್ನನ್ನು ನೀರಿನಿಂದ ರಕ್ಷಿಸುವುದು. ನೂಹ್‌ರವರು ಹೇಳಿದರು: ಇಂದು ಅಲ್ಲಾಹನ ಶಿಕ್ಷೆಯಿಂದ ರಕ್ಷಿಸುವವನಾರೂ ಇಲ್ಲ. ಅವನು ದಯೆ ತೋರಿದವರ ಹೊರತು. ಅಷ್ಟರಲ್ಲೇ ಅವರಿಬ್ಬರ ನಡುವೆ ಅಲೆಯೊಂದು ಅಡ್ಡವಾಯಿತು. ಅವನು ಮುಳುಗುವವರಲ್ಲಾದನು.
ಹೇಳಲಾಯಿತು : ಓ ಭೂಮಿಯೇ ನೀನು ನೀರನ್ನು ಹೀರಿಕೊ, ಓ ಆಕಾಶವೇ ನೀನು ಮಳೆಯನ್ನು ನಿಲ್ಲಿಸು. ನೀರು ಬತ್ತಿತು ಹಾಗೂ ಕಾರ್ಯವನ್ನು ಪೂರ್ಣ ಮಾಡಲಾಯಿತು. ಮತ್ತು ಹಡಗು 'ಜೂದಿ' ಬೆಟ್ಟದ ಮೇಲೆ ತಂಗಿತು. ನಂತರ ಅಕ್ರಮಿಗಳಾದ ಜನರಿಗೆ(ಅಲ್ಲಾಹನ ಕಾರುಣ್ಯದಿಂದ) ವಿದೂರತೆಯಿರಲಿ ಎಂದು ಹೇಳಲಾಯಿತು.
ಮತ್ತು ನೂಹ್‌ರವರು ತನ್ನ ಪ್ರಭುವನ್ನು ಕರೆದು ಪ್ರಾರ್ಥಿಸಿದರು ನನ್ನ ಪ್ರಭುವೇ ನನ್ನ ಮಗನು ನನ್ನ ಕುಟುಂಬದವರಲ್ಲಾಗಿರುವನು ಮತ್ತು ನಿಶ್ಚಯವಾಗಿಯೂ ನಿನ್ನ ವಾಗ್ದಾನವು ಸತ್ಯವಾಗಿದೆ. ನೀನಂತೂ ಸರ್ವ ನ್ಯಾಯಾಧಿಪತಿಗಳಿಗಿಂತ ಉತ್ತಮ ನ್ಯಾಯಾಧಿಪತಿ ಆಗಿರುವೆ.