ಅಥವಾ ಈ ಸತ್ಯನಿಷೇಧಿಗಳು ಕುರ್‌ಆನನ್ನು ಸ್ವತಃ ಪೈಗಂಬರರು ರಚಿಸಿರುತ್ತಾರೆ ಎಂದು ಆರೋಪಿಸುವರೇ ? ನೀವು ಉತ್ತರಿಸಿರಿ : ಹಾಗಿದ್ದರೆ ನೀವು ಅದರಲ್ಲಿರುವಂತಹ ಹತ್ತು ಅಧ್ಯಾಯಗಳನ್ನು ರಚಿಸಿ ತನ್ನಿರಿ ಮತ್ತು ಅಲ್ಲಾಹನ ಹೊರತು ನಿಮಗೆ ಸಹಾಯಕ್ಕಾಗಿ ಕರೆಯಲು ಸಾಧ್ಯವಿದ್ದವರನೆಲ್ಲ ಕರೆದುಕೊಳ್ಳಿರಿ, ನೀವು ಸತ್ಯವಂತರಾಗಿದ್ದರೆ.
ಇನ್ನು ಅವರು ನಿಮಗೆ ಉತ್ತರ ನೀಡದಿದ್ದರೆ ಖಂಡಿತವಾಗಿಯೂ ಈ ಕುರ್‌ಆನ್ ಅಲ್ಲಾಹನ ಜ್ಞಾನದಿಂದಲೇ ಅವತೀರ್ಣವಾಗಿದೆಯೆಂದು ಮತ್ತು ಅಲ್ಲಾಹನ ಹೊರತು ಇನ್ಯಾರು ಆರಾಧ್ಯರಿಲ್ಲವೆಂದು ನೀವು ಅರಿತುಕೊಳ್ಳಿರಿ. ಇನ್ನಾದರೂ ನೀವು ಅಲ್ಲಾಹನಿಗೆ ಶರಣಾಗತರಾಗುವಿರಾ ?
ಯಾರು ಐಹಿಕ ಜೀವನ ಮತ್ತು ಅದರ ವೈಭವವನ್ನು ಬಯಸುತ್ತಾರೋ ನಾವು ಅವರ ಕರ್ಮಗಳ ಪ್ರತಿಫಲವನ್ನು ಇಲ್ಲೇ ಸಂಪೂರ್ಣವಾಗಿ ನೀಡುವೆವು ಮತ್ತು ಅವರಿಗೆ ಅದರಲ್ಲಿ ಸ್ವಲ್ಪವೂ ಕಡಿಮೆ ಮಾಡಲಾಗುವುದಿಲ್ಲ.
ಒಬ್ಬ ವ್ಯಕ್ತಿಯು ತನ್ನ ಪ್ರಭುವಿನ ಕಡೆಯಿಂದ ಒಂದು ಸ್ಪಷ್ಟ ಆಧಾರದೊಂದಿಗೆ ಇದ್ದು ಅವನ ಜೊತೆಗೆ ಅಲ್ಲಾಹನ ಕಡೆಯ ಒಂದು ಸಾಕ್ಷಿಯೂ ಬಂದಿದ್ದು ಮತ್ತು ಇದಕ್ಕೆ ಮುಂಚೆ ಮೂಸಾರವರ ಗ್ರಂಥ ಮಾರ್ಗದರ್ಶಕವಾಗಿಯೂ, ಕೃಪೆಯಾಗಿಯೂ ಆಗಿರುವಾಗ (ಇಂತಹ ವ್ಯಕ್ತಿ ಮಿಥ್ಯವಾದಿಯಾಗಲು ಸಾಧ್ಯವೇ ?) ಇವರೇ ಇದರಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಆ ಗುಂಪುಗಳ ಪೈಕಿ ಇದರಲ್ಲಿ ನಿಷೇಧ ತಾಳುವ ಯಾರೇ ಆಗಲಿ ಅವರ ಅಂತಿಮ ವಾಗ್ದತ್ತ ನೆಲೆಯು ನರಕವಾಗಿರುತ್ತದೆ. ಇನ್ನು ನೀವು ಇದರಲ್ಲಿ (ಕುರ್‌ಆನಿನಲ್ಲಿ) ಯಾವುದೇ ಸಂದೇಹಕ್ಕೆ ಒಳಗಾಗದಿರಿ. ನಿಶ್ಚಯವಾಗಿಯೂ ಇದು ನಿಮ್ಮ ಪ್ರಭುವಿನ ಕಡೆಯ ಸತ್ಯವಾಗಿದೆ. ಆದರೆ ಹೆಚ್ಚಿನ ಜನರು ವಿಶ್ವಾಸವಿರಿಸುವುದಿಲ್ಲ.
ಮತ್ತು ಅಲ್ಲಾಹನ ಮೇಲೆ ಸುಳ್ಳಾರೋಪ ಹೊರಿಸಿದವರಿಗಿಂತ ದೊಡ್ಡ ಅಕ್ರಮಿ ಇನ್ನಾರಿದ್ದಾನೆ? ಅವರು ತಮ್ಮ ಪ್ರಭುವಿನ ಮುಂದೆ ಹಾಜರುಪಡಿಸಲಾಗುವರು ಮತ್ತು ಸಾಕ್ಷಿಗಳು (ದೂತರು) ಹೇಳುವರು, ಇವರೇ ತಮ್ಮ ಪ್ರಭುವಿನ ಮೇಲೆ ಸುಳ್ಳು ಹೇಳಿದವರು. ಜಾಗ್ರತೆ! ಅಕ್ರಮಿಗಳ ಮೇಲೆ ಅಲ್ಲಾಹನ ಶಾಪವಿದೆ.