ಅವರು ಹೇಳಿದರು ಅಯ್ಯೋ ನನ್ನ ಪಾಡೇ ನನಗೆ ಮಗು ಹುಟ್ಟುವುದಾದರೂ ಹೇಗೆ? ನಾನಂತೂ ಹಣ್ಣು ಮುದುಕಿ ಮತ್ತು ಈ ನನ್ನ ಪತಿಯೂ ಸಹ ವಯೋವೃದ್ಧರಾಗಿದ್ದಾರೆ! ನಿಜವಾಗಿಯೂ ಇದೊಂದು ಅದ್ಭುತ ಸಂಗತಿಯಾಗಿದೆ.
ಮಲಕ್‌ಗಳು ಹೇಳಿದರು; ಅಲ್ಲಾಹನ ವಿಧಿಯ ಬಗ್ಗೆ ನೀವು ಆಶ್ಚರ್ಯ ಪಡುತ್ತಿರುವಿರಾ ? ಮನೆಯವರೇ ನಿಮ್ಮ ಮೇಲೆ ಅಲ್ಲಾಹನ ಕೃಪೆಯು ಅವನ ಸಮೃದ್ಧಿಯೂ ಉಂಟಾಗಲಿ. ನಿಸ್ಸಂಶಯವಾಗಿಯೂ ಅಲ್ಲಾಹನು ಸ್ತುತ್ಯಾರ್ಹನು ಮಹಿಮಾವಂತನೂ ಆಗಿರುವನು.
ಲೂತರ ಬಳಿ ಅವರ ಜನಾಂಗದವರು ಧಾವಿಸುತ್ತಾ ಬಂದರು ಅವರು ಮೊದಲೇ ನೀಚ ಕೃತ್ಯದಲ್ಲಿ ಮುಳುಗಿದವರಾಗಿದ್ದರು. ಲೂತ್‌ರು ಹೇಳಿದರು, ಓ ನನ್ನ ಜನಾಂಗದವರೇ ಇವರು ನನ್ನ ಹೆಣ್ಣುಮಕ್ಕಳು, ಇವರು ನಿಮಗೆ ಅತಿ ಪರಿಶುದ್ಧರಾಗಿದ್ದಾರೆ, ನೀವು ಅಲ್ಲಾಹನನ್ನು ಭಯಪಡಿರಿ, ಮತ್ತು ನನ್ನ ಅತಿಥಿಗಳ ವಿಷಯದಲ್ಲಿ ನನ್ನನ್ನು ಅವಮಾನಿಸಬೇಡಿರಿ. ನಿಮ್ಮಲ್ಲಿ ಸಜ್ಜನ ವ್ಯಕ್ತಿ ಯಾರೂ ಇಲ್ಲವೇ ?
ಅವರು ಉತ್ತರಿಸಿದರು; ನಿಮ್ಮ ಹೆಣ್ಣು ಮಕ್ಕಳಲ್ಲಿ ನಮಗೆ ಯಾವ ಆಸಕ್ತಿ ಇಲ್ಲವೆಂಬುದನ್ನು ನೀವು ಚೆನ್ನಾಗಿ ಅರಿತಿರುವಿರಿ ಮತ್ತು ನಾವು ಬಯಸುವುದೇನೆಂಬುವುದನ್ನೂ ನಿಮಗೆ ಚೆನ್ನಾಗಿ ತಿಳಿದಿದೆ.
ಆಗ ದೇವಚರರು ಹೇಳಿದರು ಓ ಲೂತ್ ನಾವು ನಿಮ್ಮ ಪ್ರಭುವಿನ ದೂತರು. ಅವರು ನಿಮ್ಮಲ್ಲಿಗೆ ಎಂದು ತಲುಪಲಾರರು ಇನ್ನು ನೀವು ರಾತ್ರಿಯು ಒಂದಿಷ್ಟು ಉಳಿದಿರುವಾಗ ನಿಮ್ಮ ಕುಟುಂಬದವರನ್ನು ಕರೆದುಕೊಂಡು ಹೊರಟುಬಿಡಿ. ಆದರೆ ನಿಮ್ಮ ಪತ್ನಿಯ ಹೊರತು ನಿಮ್ಮಲ್ಲಿ ಯಾರು ತಿರುಗಿಯೂ ನೋಡದಿರಲಿ. ಏಕೆಂದರೆ ಅವರೆಲ್ಲರಿಗೂ ಬಾಧಿಸಲಿರುವಂತಹದ್ದು ಅವಳಿಗೂ ಬಾಧಿಸುವುದು, ನಿಶ್ಚಯವಾಗಿಯೂ ಅವರ ವಿನಾಶಕ್ಕಾಗಿ ನಿಶ್ಚಿತ ಸಮಯವು ಪ್ರಭಾತವಾಗಿದೆ. ಪ್ರಭಾತವು ಸಮೀಪವಿಲ್ಲವೇ ?