ನಿಮ್ಮ ಪ್ರಭುವು ನಿಮ್ಮ ಮೇಲೆ ಕೃಪೆ ತೋರಲೂಬಹುದು. ಅದರೆ ಇನ್ನು ಮುಂದೆಯೂ ನೀವು ಅದೇ ಕೃತ್ಯವನ್ನು ಮಾಡಿದರೆ ನಾವು ಸಹ ಪುನಃ ಹಾಗೆಯೇ ಮಾಡುವೆವು ಹಾಗೂ ನಾವು ನರಕವನ್ನು ಸತ್ಯನಿಷೇಧಿಗಳಿಗೆ ಸೆರೆಮನೆಯನ್ನಾಗಿ ಮಾಡಿರುವೆವು.
ರಾತ್ರಿ ಮತ್ತು ಹಗಲನ್ನು ನಾವು ಎರಡು ದೃಷ್ಟಾಂತಗಳನ್ನಾಗಿ ಮಾಡಿರುವೆವು. ನೀವು ನಿಮ್ಮ ಪ್ರಭುವಿನ ಅನುಗ್ರಹವನ್ನು ಅರಸಿರೆಂದು ವರ್ಷಗಳ ಗಣನೆಯನ್ನು, ಲೆಕ್ಕಾಚಾರವನ್ನು ತಿಳಿದುಕೊಳ್ಳೆಂದೂ ನಾವು ರಾತ್ರಿಯ ದೃಷ್ಟಾಂತವನ್ನು ಪ್ರಕಾಶರಹಿತವನ್ನಾಗಿಯೂ ಮತ್ತು ಹಗಲಿನ ದೃಷ್ಟಾಂತವನ್ನು ಪ್ರಕಾಶಮಯÀವನ್ನಾಗಿಯೂ ಮಾಡಿದೆವು ಮತ್ತು ಪ್ರತಿಯೊಂದನ್ನು ನಾವು ಬಹಳ ಸ್ಪಷ್ಟವಾಗಿ ವಿವರಿಸಿ ಕೊಟ್ಟಿದ್ದೇವೆ.
ನಾವು ಪ್ರತಿಯೊಬ್ಬ ಮನುಷ್ಯನ ಕರ್ಮಗಳನ್ನು ಅವನ ಕೊರಳಿಗೆ ಕಟ್ಟಿಬಿಟ್ಟದ್ದೇವೆ ಮತ್ತು ಪ್ರಳಯ ದಿನದಂದು ನಾವು ಅವನಿಗಾಗಿ ಒಂದು ಗ್ರಂಥವನ್ನು ಹೊರ ತರುವೆವು. ಅವನು ಅದನ್ನು ತನ್ನ ಮುಂದೆ ತೆರೆದಿಟ್ಟಿರುವುದಾಗಿಯೇ ಕಾಣುವನು.
ಯಾರು ಸನ್ಮಾರ್ಗ ಸ್ವೀಕರಿಸುತ್ತಾನೋ ಅವನು ಸ್ವತಃ ತನ್ನ ಒಳಿತಿಗೆಂದೇ ಸನ್ಮಾರ್ಗ ಸ್ವೀಕರಿಸುತ್ತಾನೆ ಹಾಗೂ ಯಾರು ಪಥ ಭ್ರಷ್ಟನಾಗುತ್ತನೋ ಪಥ ಭ್ರಷ್ಟತೆಯ ಭಾರವು ಅವನ ಮೇಲೆಯೇ ಇರುವುದು ಮತ್ತು ಭಾರ ಹೊತ್ತ ಯಾವೊಬ್ಬನೂ ಬೇರೊಬ್ಬ ವ್ಯಕ್ತಿಯ ಭಾರವನ್ನು ಹೊರುವುದಿಲ್ಲ ಮತ್ತು ಒಬ್ಬ ಸಂದೇಶವಾಹಕನನ್ನು ಕಳುಹಿಸುವ ಮೊದಲೇ (ಯಾವುದೇ ಜನಾಂಗವನ್ನು) ನಾವು ಶಿಕ್ಷಿಸುವುದಿಲ್ಲ.
ನಾವು ಯಾವುದಾದರೂ ನಾಡನ್ನು ನಾಶಗೊಳಿಸಲಿಚ್ಛಿಸಿದಾಗ ಅಲ್ಲಿನ ಸುಖ ಲೋಲುಪರಿಗೆ ಆದೇಶ ನೀಡುತ್ತೇವೆ ಮತ್ತು ಅವರು ಆ ನಾಡಲ್ಲಿ (ಆದೇಶಗಳನ್ನು) ಧಿಕ್ಕಾರವನ್ನೆಸಗತೊಡಗುತ್ತಾರೆ. ಆಗ ಅವರ ಮೇಲೆ (ಯಾತನೆಯ) ಮಾತು ನಿಜವಾಗಿ ಬಿಡುತ್ತದೆ ಮತ್ತು ನಾವು ಅದನ್ನು ಸಂಪೂರ್ಣವಾಗಿ ನಾಶ ಮಾಡಿ ಬಿಡುತ್ತೇವೆ.