ಅಲ್ಲಾಹು ಯಾರಿಗೆ ಸನ್ಮಾರ್ಗವನ್ನು ತೋರಿಸುತ್ತಾನೋ ಅವನು ಸನ್ಮಾರ್ಗವನ್ನು ಪಡೆಯುತ್ತಾನೆ. ಅವನು ಯಾರನ್ನು ದುರ್ಮಾರ್ಗಿಯಾಗಿ ಮಾಡುತ್ತಾನೋ—ಅವರಿಗೆ ಅವನಲ್ಲದೆ ಬೇರೆ ರಕ್ಷಕರನ್ನು ನೀವು ಕಾಣಲಾರಿರಿ. ಪುನರುತ್ಥಾನ ದಿನದಂದು ನಾವು ಅವರನ್ನು ಅವರ ಮುಖದ ಮೇಲೆ ನಡೆಯುವವರಾಗಿ ಒಟ್ಟುಗೂಡಿಸುವೆವು. ಆಗ ಅವರು ಕುರುಡರು, ಮೂಕರು ಮತ್ತು ಕಿವುಡರಾಗಿರುವರು. ನರಕಾಗ್ನಿಯೇ ಅವರ ವಾಸಸ್ಥಳ. ಅದು ತಣ್ಣಗಾಗುವಾಗಲೆಲ್ಲಾ ನಾವು ಅದನ್ನು ಭುಗಿಲೇಳುವಂತೆ ಉರಿಸುವೆವು.
ಅದು ಅವರಿಗೆ ನೀಡಲಾಗುವ ಪ್ರತಿಫಲವಾಗಿದೆ. ಏಕೆಂದರೆ ಅವರು ನಮ್ಮ ವಚನಗಳನ್ನು ನಿಷೇಧಿಸಿದರು ಮತ್ತು ಅವರು ಕೇಳಿದರು: “ನಾವು ಮೂಳೆಗಳು ಮತ್ತು ಚಿಂದಿ ಅವಶೇಷಗಳಾಗಿ ಬಿಟ್ಟ ಬಳಿಕವೂ ನಮ್ಮನ್ನು ಹೊಸ ಸೃಷ್ಟಿಯಾಗಿ ಎಬ್ಬಿಸಲಾಗುವುದೇ?”
ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಅಲ್ಲಾಹನಿಗೆ ಅವರಂತಹ ಇನ್ನೊಂದು ಸೃಷ್ಟಿಯನ್ನು ಸೃಷ್ಟಿಸುವ ಶಕ್ತಿಯಿದೆಯೆಂದು ಅವರು ನೋಡುವುದಿಲ್ಲವೇ? ಅವನು ಅವರಿಗೆ ಒಂದು ಅವಧಿಯನ್ನು ನಿಶ್ಚಯಿಸಿದನು. ಅದರಲ್ಲಿ ಸಂಶಯವೇ ಇಲ್ಲ. ಆದರೆ ಅಕ್ರಮಿಗಳು ನಿಷೇಧಿಸುವುದನ್ನಲ್ಲದೆ ಬೇರೇನೂ ಮಾಡುವುದಿಲ್ಲ.
ನಾವು ಮೂಸಾರಿಗೆ ಒಂಬತ್ತು ಸ್ಪಷ್ಟ ದೃಷ್ಟಾಂತಗಳನ್ನು ನೀಡಿದ್ದೆವು.[1] ನೀವು ಇಸ್ರಾಯೇಲ್ ಮಕ್ಕಳೊಡನೆ ಮೂಸಾ ಅವರ ಬಳಿಗೆ ಬಂದಾಗ ಸಂದರ್ಭದ ಬಗ್ಗೆ ಕೇಳಿ ನೋಡಿ. ಆಗ ಫರೋಹ ಹೇಳಿದನು: “ಓ ಮೂಸಾ! ನೀನು ಖಂಡಿತ ಮಾಟಕ್ಕೊಳಗಾಗಿದ್ದೀ ಎಂದು ನನಗೆ ತೋರುತ್ತಿದೆ.”
[1] ಒಂಬತ್ತು ದೃಷ್ಟಾಂತಗಳು ಎಂದರೆ ಸರ್ಪವಾಗಿ ಮಾರ್ಪಡುವ ಕೋಲು, ಬೆಳ್ಳಗಾಗುವ ಕೈ, ಬರಗಾಲ, ಹಣ್ಣುಗಳ ಅಭಾವ, ಚಂಡಮಾರುತ, ಮಿಡತೆ, ಹೇನು, ಕಪ್ಪೆ ಮತ್ತು ರಕ್ತ.
ಮೂಸಾ ಹೇಳಿದರು: “ಭೂಮ್ಯಾಕಾಶಗಳ ಪರಿಪಾಲಕನೇ (ಅಲ್ಲಾಹನೇ) ಇವುಗಳನ್ನು ಸ್ಪಷ್ಟ ದೃಷ್ಟಾಂತಗಳಾಗಿ ಅವತೀರ್ಣಗೊಳಿಸಿದ್ದಾನೆಂದು ಖಂಡಿತವಾಗಿಯೂ ನಿನಗೆ ತಿಳಿದಿದೆ. ಓ ಫರೋಹ! ಖಂಡಿತವಾಗಿಯೂ ನೀನು ಸರ್ವನಾಶವಾಗುವೆ ಎಂದು ನನಗೆ ತೋರುತ್ತಿದೆ.”