[1] ಯಹೂದಿಗಳ ಒಂದು ಗೋತ್ರವಾದ ಬನೂ ಕುರೈಝದವರು ಮದೀನದ ಉತ್ತರ ಭಾಗದಲ್ಲಿ ವಾಸವಾಗಿದ್ದರು. ಇವರು ಮುಸ್ಲಿಮರೊಡನೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಪ್ರಕಾರ ಇವರಲ್ಲಿ ಒಬ್ಬರು ದಾಳಿಗೊಳಗಾದರೆ ಇನ್ನೊಬ್ಬರು ಸಹಾಯ ಮಾಡಬೇಕು. ಆದರೆ ಮುಸ್ಲಿಮರ ಮೇಲೆ ಸತ್ಯನಿಷೇಧಿಗಳು ದಾಳಿ ಮಾಡಿದಾಗ ಈ ಯಹೂದಿಗಳು ಒಪ್ಪಂದವನ್ನು ಮುರಿದು ಮುಸ್ಲಿಮರಿಗೆ ವಿರುದ್ಧವಾಗಿ ಸತ್ಯನಿಷೇಧಿಗಳಿಗೆ ಸಹಾಯ ಮಾಡಿದರು. ಅವರು ಒಪ್ಪಂದವನ್ನು ಮುರಿದ ಕಾರಣ ಖಂದಕ್ ಯುದ್ಧದ ನಂತರ ಮುಸ್ಲಿಮರು ಅವರ ವಿರುದ್ಧ ದಂಡೆತ್ತಿ ಹೋದರು. ಅವರು ಕೋಟೆಯಲ್ಲಿ ಅವಿತುಕೊಂಡರು. ಸುಮಾರು 25 ದಿನಗಳ ನಂತರ ಅವರು ಶರಣಾಗಿ ತಮ್ಮ ವಿಷಯದಲ್ಲಿ ತೀರ್ಪು ನೀಡುವ ಹಕ್ಕನ್ನು ಸಅದ್ ಬಿನ್ ಮುಆದ್‌ಗೆ ನೀಡಿದರು. ಸಅದ್ ಬಿನ್ ಮುಆದ್ ನೀಡಿದ ತೀರ್ಪಿನಂತೆ ಅವರಲ್ಲಿನ ಗಂಡಸರನ್ನು ಹತ್ಯೆ ಮಾಡಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಖೈದಿಗಳಾಗಿ ಮಾಡಿಕೊಳ್ಳಲಾಯಿತು.