[1] ಏಳು ಸಮೃದ್ಧಪೂರ್ಣ ವರ್ಷಗಳು ಕಳೆದ ಬಳಿಕ ಏಳು ಬರಗಾಲದ ವರ್ಷಗಳು ಬಂದವು. ಈ ವರ್ಷಗಳಲ್ಲಿ ಬರಗಾಲವು ಎಷ್ಟು ತೀವ್ರವಾಗಿತ್ತೆಂದರೆ ಈಜಿಪ್ಚ್ ದೇಶವು ಸಂಪೂರ್ಣವಾಗಿ ಬರ ಪೀಡಿತವಾಯಿತು. ಯಾಕೂಬ್ (ಅವರ ಮೇಲೆ ಶಾಂತಿಯಿರಲಿ) ಮತ್ತು ಅವರ ಮಕ್ಕಳು ವಾಸವಾಗಿದ್ದ ಕನ್‌ಆನ್ ದೇಶವು ಕೂಡ ಬರಗಾಲಕ್ಕೆ ತುತ್ತಾಯಿತು. ಯೂಸುಫ್ (ಅವರ ಮೇಲೆ ಶಾಂತಿಯಿರಲಿ) ಮೊದಲೇ ಯೋಜನೆಗಳನ್ನು ರಚಿಸಿ ಬರಗಾಲವನ್ನು ಅತ್ಯಂತ ನಾಜೂಕಾಗಿ ನಿರ್ವಹಿಸಿದರು. ಈಜಿಪ್ಟಿನಲ್ಲಿ ಧಾನ್ಯ ಸಿಗುತ್ತದೆಯೆಂಬ ಸುದ್ದಿ ತಿಳಿದಾಗ ಯಾಕೂಬ್ (ಅವರ ಮೇಲೆ ಶಾಂತಿಯಿರಲಿ) ತಮ್ಮ ಮಕ್ಕಳನ್ನು ಧಾನ್ಯ ಖರೀದಿಸಲು ಈಜಿಪ್ಟಿಗೆ ಕಳುಹಿಸಿದರು.
[1] ಯೂಸುಫ್ (ಅವರ ಮೇಲೆ ಶಾಂತಿಯಿರಲಿ) ತನ್ನ ಸಹೋದರರನ್ನು ಅತ್ಯುತ್ತಮವಾಗಿ ಸತ್ಕರಿಸಿದರು. ಅವರಿಗೆ ಬೇಕಾದ ಎಲ್ಲಾ ಆಹಾರ ಸಾಮಗ್ರಿಗಳನ್ನು ಒದಗಿಸಿದರು. ನಮಗೊಬ್ಬ ತಂದೆ ಮತ್ತು ಇಬ್ಬರು ತಮ್ಮಂದಿರಿದ್ದಾರೆ. ಒಬ್ಬ ತಮ್ಮ ಕಳೆದುಹೋಗಿದ್ದಾನೆ. ಇನ್ನೊಬ್ಬ ತಮ್ಮನನ್ನು ತಂದೆಯವರು ಎಲ್ಲಿಗೂ ಕಳಿಸುವುದಿಲ್ಲ. ಆದ್ದರಿಂದ ಅವನು ನಮ್ಮ ಜೊತೆಗೆ ಬಂದಿಲ್ಲವೆಂದು ಸಹೋದರರು ಹೇಳಿದರು. ಆಗ ಯೂಸುಫ್ (ಅವರ ಮೇಲೆ ಶಾಂತಿಯಿರಲಿ) ಮುಂದೆ ನೀವು ಇಲ್ಲಿಗೆ ಆಹಾರ ಸಾಮಗ್ರಿಗಳಿಗಾಗಿ ಬರುವಾಗ ತಮ್ಮನನ್ನೂ ಕರೆದುಕೊಂಡು ಬನ್ನಿ. ಇಲ್ಲದಿದ್ದರೆ ನಿಮಗೆ ನಾನು ಆಹಾರ ಸಾಮಗ್ರಿಗಳನ್ನು ಕೊಡುವುದಿಲ್ಲವೆಂದು ಹೇಳಿದರು.