[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮಕ್ಕಾದಿಂದ ಮದೀನಕ್ಕೆ ವಲಸೆ ಬಂದಾಗ, ಸುಮಾರು ಒಂದು ತಿಂಗಳ ಕಾಲ ಬೈತುಲ್ ಮುಕದ್ದಿಸ್‌ಗೆ ಅಭಿಮುಖವಾಗಿ ನಿಂತು ನಮಾಝ್ ನಿರ್ವಹಿಸುವುದನ್ನು ಮುಂದುವರಿಸಿದರು. ಅವರು ಕಾಬಾಲಯಕ್ಕೆ ತಿರುಗಿ ನಿಂತು ನಮಾಝ್ ನಿರ್ವಹಿಸಲು ಬಯಸುತ್ತಿದ್ದರು. ಅದಕ್ಕಾಗಿ ಅವರು ಪ್ರಾರ್ಥಿಸುತ್ತಿದ್ದರು ಮತ್ತು ಯಾವುದಾದರೂ ಸಂದೇಶ ಬರಬಹುದೇ ಎಂದು ಪದೇ ಪದೇ ಆಕಾಶದ ಕಡೆಗೆ ನೋಡುತ್ತಿದ್ದರು. ಕೊನೆಗೆ ಅಲ್ಲಾಹು ಕಿಬ್ಲ ಬದಲಾವಣೆಯ ಬಗ್ಗೆ ವಚನವನ್ನು ಅವತೀರ್ಣಗೊಳಿಸಿದನು. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕಿಬ್ಲ ಬದಲಾವಣೆ ಮಾಡಿದಾಗ ಯಹೂದಿಗಳು ಮತ್ತು ಕಪಟ ವಿಶ್ವಾಸಿಗಳು ಗದ್ದಲವೆಬ್ಬಿಸಿದರು. ನಮಾಝ್ ಅಲ್ಲಾಹನ ಆರಾಧನೆಯಾಗಿದೆ ಮತ್ತು ಅಲ್ಲಾಹು ನಿಶ್ಚಯಿಸಿದ ದಿಕ್ಕಿಗೆ ತಿರುಗಿ ಅದನ್ನು ನಿರ್ವಹಿಸಬೇಕಾಗಿದೆ. ಪೂರ್ವ ಮತ್ತು ಪಶ್ಚಿಮ ದಿಕ್ಕುಗಳು ಅಲ್ಲಾಹನಿಗೆ ಸೇರಿದ್ದು. ಅವನು ಯಾವ ದಿಕ್ಕಿಗೆ ತಿರುಗಬೇಕೆಂದು ಆದೇಶಿಸಿದನೋ ಆ ದಿಕ್ಕಿಗೆ ತಿರುಗಿ ನಮಾಝ್ ನಿರ್ವಹಿಸುವುದು ದಾಸನ ಕರ್ತವ್ಯ. ಕಿಬ್ಲ ಬದಲಾವಣೆಯ ಆದೇಶ ಅಸರ್ ನಮಾಝ್‌ನ ಸಂದರ್ಭದಲ್ಲಿ ಬಂದಿತ್ತು ಮತ್ತು ಕಾಬಾಲಯಕ್ಕೆ ತಿರುಗಿ ಅಸರ್ ನಮಾಝ್ ನಿರ್ವಹಿಸಲಾಯಿತು. [2] ಅಂತಿಮ ಪ್ರವಾದಿಯ ಕಿಬ್ಲ ಕಾಬಾ ಆಗಿದೆ ಎಂದು ಯಹೂದಿಗಳ ಗ್ರಂಥದಲ್ಲಿ ಸ್ಪಷ್ಟ ಸೂಚನೆಗಳಿದ್ದವು. ಅವರಿಗೆ ಇದು ಸ್ಪಷ್ಟವಾಗಿ ತಿಳಿದಿತ್ತು. ಆದರೂ ತಮ್ಮ ಅಹಂಕಾರ ಮತ್ತು ಅಸೂಯೆಯ ನಿಮಿತ್ತ ಅದನ್ನು ಸ್ವೀಕರಿಸಲು ಅವರು ಹಿಂದೇಟು ಹಾಕಿದರು.