ನೀವು ದಾನ ಧರ್ಮಗಳನ್ನು ಬಹಿರಂಗವಾಗಿ ಕೊಟ್ಟರೂ ಒಳ್ಳೆಯದೇ ಆಗಿದೆ. ಆದರೆ ಅದನ್ನು ನೀವು ಬಡವರಿಗೆ ರಹಸ್ಯವಾಗಿ ಕೊಡುವುದಾದರೆ ಅದು ನಿಮ್ಮ ಪಾಲಿಗೆ ಉತ್ತಮವಾಗಿದೆ. (ಹೀಗೆ ಮಾಡಿದರೆ) ಅಲ್ಲಾಹನು ನಿಮ್ಮ ಕೆಡುಕುಗಳನ್ನು ಅಳಿಸಿಹಾಕುವನು ಮತ್ತು ಅಲ್ಲಾಹನು ನೀವು ಮಾಡುತ್ತಿರುವುದನ್ನು ಬಲ್ಲನು.
ಅವರನ್ನು ಸನ್ಮಾರ್ಗಕ್ಕೆ ತರುವ ಹೊಣೆಗಾರಿಕೆ ನಿಮ್ಮ ಮೇಲಿಲ್ಲ. ಆದರೆ ಅಲ್ಲಾಹನು ತಾನಿಚ್ಛಿಸುವವರಿಗೆ ಸನ್ಮಾರ್ಗವನ್ನು ನೀಡುತ್ತಾನೆ. ನೀವು ಉತ್ತಮವಾದುದ್ದನ್ನೂ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡಿದರೆ ಅದರ ಪ್ರಯೋಜನ ನಿಮಗೆ ಸಿಗುವುದು. ನೀವು ಅಲ್ಲಾಹನ ಸಂಪ್ರೀತಿಯನ್ನು ಅರಸುತ್ತಲೇ ಖರ್ಚು ಮಾಡಿರಿ. ನೀವು ಯಾವ ಸಂಪತ್ತನ್ನು ಖರ್ಚು ಮಾಡಿದರೂ ಅದರ ಸಂಪೂರ್ಣ ಪ್ರತಿಫಲವನ್ನು ನಿಮಗೆ ನೀಡಲಾಗುವುದು. ಮತ್ತು ನಿಮ್ಮ ಮೇಲೆ ಅನ್ಯಾಯವೆಸಗಲಾಗದು.
ದಾನ ಧರ್ಮಗಳು ಭೂಮಿಯಲ್ಲಿ ಸಂಚರಿಸಿ ಸಂಪಾದಿಸಲು ಸಾಧ್ಯವಾಗದಂತೆ ಅಲ್ಲಾಹನ ಮಾರ್ಗದಲ್ಲಿ ಕಾರ್ಯವೆಸಗುವ ಬಡವರಿಗೆ ಮಾತ್ರವಾಗಿದೆ. ಅವರ ಸ್ವಾಭಿಮಾನದ ನಿಮಿತ್ತ ಅರಿವಿಲ್ಲದವರು ಅವರನ್ನು ಧನಿಕರೆಂದು ಭಾವಿಸುತ್ತಾರೆ. ಆದರೆ ನೀವು ಅವರ ಮುಖ ಲಕ್ಷಣಗಳ ಮೂಲಕವೇ ಅವರನ್ನು ಗುರುತಿಸುವಿರಿ. ಅವರು ಜನರನ್ನು ಕಾಡಿ ಬೇಡುವುದಿಲ್ಲ. ನೀವು ಯಾವ ಉತ್ತಮ ಸಂಪತ್ತನ್ನು ಖರ್ಚು ಮಾಡಿದರೂ ಆ ಕುರಿತು ಅಲ್ಲಾಹನು ಚೆನ್ನಾಗಿ ಬಲ್ಲನು
ಯಾರು ಹಗಲು, ರಾತ್ರಿ ರಹಸ್ಯವಾಗಿಯು, ಬಹಿರಂಗವಾಗಿಯು ತಮ್ಮ ಸಂಪತ್ತನ್ನು ಖರ್ಚು ಮಾಡುತ್ತಾರೋ ಅವರಿಗೆ ಅವರ ಪ್ರಭುವಿನ ಬಳಿ ಪ್ರತಿಫಲವಿದೆ. (ಪುನರುತ್ಥಾನದ ದಿನ) ಅವರು ಭಯಪಡಬೇಕಾಗಿಲ್ಲ ಮತ್ತು (ಇಹಲೋಕದ ಬಗ್ಗೆ) ದುಖ್ಖಿಃಸಬೇಕಾಗಿಯೂ ಇಲ್ಲ.