[1] ರಮದಾನ್ ತಿಂಗಳಲ್ಲಿ ಉಪವಾಸ ಆಚರಿಸಲು ಸಾಧ್ಯವಾಗದ ರೋಗಿಗಳಿಗೆ ಮತ್ತು ಪ್ರಯಾಣಿಕರಿಗೆ ಉಪವಾಸ ತೊರೆಯಲು ಅನುಮತಿಯಿದೆ. ಅವರು ಆ ಉಪವಾಸಗಳನ್ನು ನಂತರ ನಿರ್ವಹಿಸಿದರೆ ಸಾಕು. [2] ಅಂದರೆ ಬಹಳ ಕಷ್ಟದಿಂದ ಉಪವಾಸ ಆಚರಿಸಲು ಸಾಧ್ಯವಾಗುವವರು. ಉದಾಹರಣೆಗೆ, ವಯೋವೃದ್ಧರು ಮತ್ತು ಗುಣವಾಗುವ ನಿರೀಕ್ಷೆಯಿಲ್ಲದ ಕಾಯಿಲೆಯಿಂದ ಬಳಲುವವರಿಗೆ ಉಪವಾಸ ಆಚರಿಸಲು ಕಷ್ಟವಾಗುವುದಾದರೆ ಅವರು ಉಪವಾಸ ತೊರೆದು ಪರಿಹಾರದ ರೂಪದಲ್ಲಿ ಒಬ್ಬ ಬಡವನಿಗೆ ಅನ್ನದಾನ ಮಾಡಿದರೆ ಸಾಕು. ಆದರೆ ಹೆಚ್ಚಿನ ವ್ಯಾಖ್ಯಾನಕಾರರ ಅಭಿಪ್ರಾಯ ಪ್ರಕಾರ ಉಪವಾಸ ಆಚರಿಸಲು ಸಾಧ್ಯವಾಗುವ ಎಲ್ಲರೂ ಇದರಲ್ಲಿ ಒಳಪಡುತ್ತಾರೆ. ಇಸ್ಲಾಮಿನ ಆರಂಭಕಾಲದಲ್ಲಿ ಜನರಿಗೆ ಉಪವಾಸ ಆಚರಿಸುವ ಅಭ್ಯಾಸವಿಲ್ಲದ್ದರಿಂದ ಉಪವಾಸ ಆಚರಿಸುವುದನ್ನು ತೊರೆದು ಅದರ ಬದಲಿಗೆ ಒಬ್ಬ ಬಡವನಿಗೆ ಅನ್ನದಾನ ಮಾಡುವ ರಿಯಾಯಿತಿ ನೀಡಲಾಗಿತ್ತು. ನಂತರ ಈ ರಿಯಾಯಿತಿಯನ್ನು ರದ್ದುಗೊಳಿಸಿ ಉಪವಾಸ ಆಚರಿಸಲು ಸಾಧ್ಯವಾಗುವ ಎಲ್ಲರಿಗೂ ಉಪವಾಸ ಆಚರಿಸುವುದನ್ನು ಕಡ್ಡಾಯಗೊಳಿಸಲಾಯಿತು. ಆದರೆ ವಯೋವೃದ್ದರಿಗೆ ಮತ್ತು ನಿತ್ಯ ರೋಗಿಗಳಿಗೆ ಉಪವಾಸ ಆಚರಿಸಲು ಕಷ್ಟವಾಗುವುದಾದರೆ ಅದರ ಬದಲಿಗೆ ಪರಿಹಾರ ನೀಡಬಹುದೆಂಬ ನಿಯಮವನ್ನು ಊರ್ಜಿತದಲ್ಲಿರಿಸಲಾಯಿತು. [3] ಒಂದು ಉಪವಾಸಕ್ಕೆ ಪರಿಹಾರವಾಗಿ ಒಬ್ಬ ಬಡವನಿಗೆ ಅನ್ನದಾನ ಮಾಡಬೇಕು. ಆದರೆ ಯಾರಾದರೂ ಒಬ್ಬನಿಗಿಂತ ಹೆಚ್ಚು ಬಡವರಿಗೆ ಅನ್ನದಾನ ಮಾಡುವುದಾದರೆ ಅದು ಅವರಿಗೆ ಒಳಿತಾಗಿದೆ.