[1] ಕಪಟವಿಶ್ವಾಸಿಗಳಲ್ಲಿ ಕೆಲವರು ಹೇಳುತ್ತಿದ್ದರು: “ನಮಗೆ ಎರಡು ಹೃದಯಗಳಿವೆ. ಒಂದು ಹೃದಯದಲ್ಲಿ ಮುಸಲ್ಮಾನರ ಬಗ್ಗೆ ಪ್ರೀತಿಯಿದೆ ಮತ್ತು ಇನ್ನೊಂದು ಹೃದಯದಲ್ಲಿ ಸತ್ಯನಿಷೇಧಿಗಳ ಬಗ್ಗೆ ಪ್ರೀತಿಯಿದೆ.” ಆದರೆ ಅಲ್ಲಾಹು ಇದನ್ನು ನಿರಾಕರಿಸಿ, ಮನುಷ್ಯನಿಗೆ ಇರುವುದು ಒಂದೇ ಹೃದಯ. ಆ ಹೃದಯದಲ್ಲಿ ಅಲ್ಲಾಹನಲ್ಲಿರುವ ಪ್ರೀತಿ ಮತ್ತು ಅಲ್ಲಾಹನ ವೈರಿಗಳಲ್ಲಿರುವ ಪ್ರೀತಿ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾನೆ. [2] ಝಿಹಾರ್ ಎಂದರೆ ಹೆಂಡತಿಯನ್ನು “ನೀನು ನನಗೆ ನನ್ನ ತಾಯಿ ಸಮಾನ” ಎಂದು ಹೇಳಿ ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನು ಕಡಿದುಕೊಳ್ಳುವುದು. ಆದರೆ ಇದು ವಿಚ್ಛೇದನವಲ್ಲ. ಆದ್ದರಿಂದ ಹೆಂಡತಿಗೆ ಅತ್ತ ಗಂಡನೊಂದಿಗೆ ಬದುಕಲೂ ಆಗದೆ ಇತ್ತ ಬೇರೊಬ್ಬನನ್ನು ವಿವಾಹವಾಗಲೂ ಆಗದೆ ಅಡಕತ್ತರಿಯಲ್ಲಿ ಸಿಲುಕಿದ ಪರಿಸ್ಥಿತಿಯನ್ನು ಅನುಭವಿಸಬೇಕಾಗಿ ಬರುತ್ತಿತ್ತು. ಇಸ್ಲಾಮಿ ಪೂರ್ವ ಕಾಲದಲ್ಲಿ ವ್ಯಾಪಕವಾಗಿದ್ದ ಇಂತಹ ಅನೇಕ ಮಹಿಳಾ ವಿರೋಧಿ ಸಂಪ್ರದಾಯಗಳನ್ನು ಇಸ್ಲಾಂ ಕೊನೆಗೊಳಿಸಿತು. [3] ಮಕ್ಕಳನ್ನು ದತ್ತು ಪಡೆಯುವುದನ್ನು ಇಸ್ಲಾಂ ವಿರೋಧಿಸುವುದಿಲ್ಲ. ಆದರೆ ದತ್ತು ಪಡೆದ ಮಕ್ಕಳು ದತ್ತು ಪುತ್ರರಾಗಿರುತ್ತಾರೆಯೇ ವಿನಾ ದತ್ತು ಪಡೆದವನ ಸ್ವಂತ ಮಕ್ಕಳ ಸ್ಥಾನಮಾನಕ್ಕೇರುವುದಿಲ್ಲ. ದತ್ತು ಪಡೆದ ವ್ಯಕ್ತಿ ಕೇವಲ ಸಂರಕ್ಷಕನಾಗುತ್ತಾನೆಯೇ ಹೊರತು ನೈಜ ತಂದೆಯಾಗುವುದಿಲ್ಲ.