[1] ಅವರು ದೇವರುಗಳೆಂದು ಆರಾಧಿಸುತ್ತಿರುವುದು ಒಂದೋ ವಿಗ್ರಹಗಳು, ಅಥವಾ ಜಿನ್ನ್‌ಗಳು ಅಥವಾ ಪಿಶಾಚಿಗಳನ್ನಾಗಿದೆ. ಅವರ ನಿಜಸ್ಥಿತಿಯೇನೆಂದು ಆರಾಧಿಸುವವರಿಗೆ ತಿಳಿದಿಲ್ಲ. ಅದೇ ರೀತಿ ಸಮಾಧಿಯಲ್ಲಿರುವ ಮಹಾಪುರುಷರನ್ನು ಆರಾಧಿಸುವವರು ಕೂಡ. ಅವರು ನಿಜವಾಗಿಯೂ ದೇವರುಗಳೇ? ಅವರು ಪ್ರಾರ್ಥಿಸಲು ಅರ್ಹರೇ? ಪ್ರಾರ್ಥಿಸಿದರೆ ಅವರು ಉತ್ತರ ನೀಡುತ್ತಾರೆಯೇ? ಮುಂತಾದ ಯಾವುದೂ ಆರಾಧಿಸುವವರಿಗೆ ಸ್ಪಷ್ಟವಾಗಿ ತಿಳಿದಿಲ್ಲ. ಯಾವುದೇ ಸ್ಪಷ್ಟ ಆಧಾರವಿಲ್ಲದಿದ್ದರೂ ಅವರು ಅಲ್ಲಾಹನನ್ನು ಬಿಟ್ಟು ಆ ದೇವರುಗಳನ್ನು ಆರಾಧಿಸುತ್ತಾರೆ. ಅಲ್ಲಾಹು ಒದಗಿಸಿದ ಧನವನ್ನು ಆ ದೇವರುಗಳಿಗೆ ಕಾಣಿಕೆ ಹಾಕುತ್ತಾರೆ ಮತ್ತು ಅವರ ಮೇಲೆ ಹರಕೆ ಹೊರುತ್ತಾರೆ.
[1] ಮಕ್ಕಾದ ಬಹುದೇವಾರಾಧಕರಿಗೆ ಒಂದು ಹೆಣ್ಣು ಮಗು ಹುಟ್ಟಿದರೆ ಅವರು ಅದನ್ನು ಅನಿಷ್ಟವೆಂದು ಪರಿಗಣಿಸಿ ಜೀವಂತ ಹೂಳುತ್ತಾರೆ. ಹೆಣ್ಣು ಮಗು ಎಂಬ ಕಳಂಕವನ್ನು ಜೀವನವಿಡೀ ಹೊತ್ತುಕೊಂಡು ಆ ಮಗುವನ್ನು ಸಾಕಲು ಅವರು ಸಿದ್ಧರಿಲ್ಲ. ಆದರೆ ಅದೇ ಬಹುದೇವಾರಾಧಕರು ದೇವದೂತರುಗಳನ್ನು ಅಲ್ಲಾಹನ ಹೆಣ್ಣು ಮಕ್ಕಳೆಂದು ಆರೋಪಿಸುತ್ತಾರೆ. ಆಗ ಅವರಿಗೆ ಅದು ಕಳಂಕವೆಂದು ತೋರುವುದಿಲ್ಲ.