[1] ಝೈದ್ ಬಿನ್ ಹಾರಿಸ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗುಲಾಮರಾಗಿದ್ದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಸ್ವತಂತ್ರಗೊಳಿಸಿ ದತ್ತುಪುತ್ರನಾಗಿ ಸ್ವೀಕರಿಸಿದರು. ತನ್ನ ಸೋದರ ಸಂಬಂಧಿ ಜಹ್‌ಶ್‌ನ ಮಗಳು ಝೈನಬರನ್ನು ಅವರಿಗೆ ವಿವಾಹ ಮಾಡಿಕೊಟ್ಟರು. ಆದರೆ ದಂಪತಿಗಳ ಮಧ್ಯೆ ಮನಸ್ತಾಪವುಂಟಾಗಿ ದಾಂಪತ್ಯದಲ್ಲಿ ಬಿರುಕು ಗೋಚರಿಸಿತು. ಬಿರುಕು ಉಲ್ಬಣಿಸಿದಾಗ ಝೈದ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ತಲಾಕ್ ನೀಡಲು ಅನುಮತಿ ಕೇಳಿದರು. ಆದರೆ ಅದು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಷ್ಟವಿರಲಿಲ್ಲ. ಅವರು ದಾಂಪತ್ಯ ಮುಂದುವರಿಸಲು ಹೇಳಿದರು. [2] ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದತ್ತುಪುತ್ರ ಝೈದ್ ತನ್ನ ಪತ್ನಿ ಝೈನಬರಿಗೆ ವಿಚ್ಛೇದನ ನೀಡಿದರು. ದತ್ತುಪುತ್ರರು ವಿಚ್ಛೇದಿಸಿದ ಮಹಿಳೆಯನ್ನು ದತ್ತು ಪಡೆದವರು ವಿವಾಹವಾಗಬಾರದು ಎಂಬ ರೂಢಿ ಅರೇಬಿಯಾದಲ್ಲಿ ಅಸ್ತಿತ್ವದಲ್ಲಿತ್ತು. ಅಜ್ಞಾನಕಾಲದ ಈ ರೂಢಿಯನ್ನು ನಿರ್ಮೂಲನ ಮಾಡಲು ಅಲ್ಲಾಹನ ಆಜ್ಞೆಯಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝೈನಬರನ್ನು ವಿವಾಹವಾದರು.
[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝೈನಬರನ್ನು ವಿವಾಹವಾದಾಗ, ಮುಹಮ್ಮದ್ ತನ್ನ ಸೊಸೆಯನ್ನೇ ವಿವಾಹವಾಗಿದ್ದಾರೆ ಎಂದು ಸತ್ಯನಿಷೇಧಿಗಳು ಮತ್ತು ಕಪಟವಿಶ್ವಾಸಿಗಳು ಗುಲ್ಲೆಬ್ಬಿಸಿದರು. ಇದಕ್ಕೆ ಉತ್ತರವಾಗಿ ಈ ವಚನವು ಅವತೀರ್ಣವಾಯಿತು. ಅಂದರೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಂಡು ಮಕ್ಕಳಿಲ್ಲ. ನಿಮ್ಮಲ್ಲಿ ಯಾರೂ ಅವರ ಗಂಡು ಮಕ್ಕಳಲ್ಲ. ಅವರ ದತ್ತುಪುತ್ರ ಝೈದ್ ಅವರ ಸ್ವಂತ ಮಗನಲ್ಲದ್ದರಿಂದ ಝೈನಬ ಅವರ ಸೊಸೆಯಲ್ಲ.
[2] ಅಂದರೆ ಅವರು ಅಂತಿಮ ಪ್ರವಾದಿ. ಅವರ ನಂತರ ಬೇರೆ ಪ್ರವಾದಿ ಬರುವುದಿಲ್ಲ.