[1] ಅಂದರೆ ನೀವು ಅಭ್ಯಾಸ ಬಲದಿಂದ ಅಥವಾ ಉದ್ದೇಶಪೂರ್ವಕವಲ್ಲದೆ ಮಾಡುವ ಪ್ರತಿಜ್ಞೆಗಳನ್ನು ಉಲ್ಲಂಘಿಸಿದರೆ ಅಲ್ಲಾಹು ನಿಮ್ಮನ್ನು ಶಿಕ್ಷಿಸುವುದಿಲ್ಲ.
[1] ನಾನು ಹೆಂಡತಿಯೊಂದಿಗೆ ಒಂದು ತಿಂಗಳ ಕಾಲ ಅಥವಾ ಎರಡು ತಿಂಗಳ ಕಾಲ ಸಂಬಂಧವಿಟ್ಟುಕೊಳ್ಳುವುದಿಲ್ಲವೆಂದು ಗಂಡ ಪ್ರತಿಜ್ಞೆ ಮಾಡಿ, ಆ ನಿಗದಿತ ಅವಧಿಯ ನಂತರ ಹೆಂಡತಿಯೊಂದಿಗೆ ಸಂಬಂಧ ಮುಂದುವರಿಸಿದರೆ ಆತ ಪರಿಹಾರ ನೀಡಬೇಕಾಗಿಲ್ಲ. ಆದರೆ ಆ ಅವಧಿ ಪೂರ್ಣಗೊಳ್ಳುವುದಕ್ಕೆ ಮುಂಚೆ ಅವನು ಹೆಂಡತಿಯೊಂದಿಗೆ ಸಂಬಂಧ ಸ್ಥಾಪಿಸಿದರೆ ಪರಿಹಾರ ನೀಡಬೇಕಾಗುತ್ತದೆ. ಇನ್ನು ಗಂಡ ಅವಧಿಯನ್ನು ನಿಶ್ಚಯಿಸದೆ ನಾನು ನನ್ನ ಹೆಂಡತಿಯೊಂದಿಗೆ ಸಂಬಂಧವಿಟ್ಟುಕೊಳ್ಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರೆ, ಅವನಿಗೆ ನಾಲ್ಕು ತಿಂಗಳ ಕಾಲಾವಕಾಶವಿದೆ. ಅದರೊಳಗೆ ಒಂದೋ ಅವನು ಹೆಂಡತಿಯೊಂದಿಗೆ ಸಂಬಂಧವನ್ನು ಮುಂದುವರಿಸಬೇಕು ಅಥವಾ ಆಕೆಗೆ ವಿಚ್ಛೇದನೆ ನೀಡಬೇಕು. ನಾಲ್ಕು ತಿಂಗಳುಗಳಿಗಿಂತ ಹೆಚ್ಚು ಕಾಲ ಹೆಂಡತಿಯೊಂದಿಗೆ ಸಂಬಂಧ ಕಡಿಯುವುದಕ್ಕೆ ಅನುಮತಿಯಿಲ್ಲ. ಆತ ಸಂಬಂಧವನ್ನು ಮುಂದುವರಿಸುವುದಾದರೆ ಅದಕ್ಕೆ ಪರಿಹಾರ ನೀಡಬೇಕು. ಇನ್ನು ಅವನು ಸಂಬಂಧವನ್ನು ಮುಂದುವರಿಸದೆ ಮತ್ತು ವಿಚ್ಛೇದನೆಯನ್ನೂ ನೀಡದೆ, ಸಮಸ್ಯೆಯು ನ್ಯಾಯಾಲಯವನ್ನು ತಲುಪಿದರೆ, ಹೆಂಡತಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲು ಅವನಿಗೆ ಎರಡರಲ್ಲಿ ಒಂದನ್ನು ಆರಿಸುವಂತೆ ಒತ್ತಡ ಹೇರಲಾಗುತ್ತದೆ.
[1] ಪತ್ನಿಯನ್ನು ಮರಳಿ ಸ್ವೀಕರಿಸುವುದು ಒಳಿತಿನ ಉದ್ದೇಶದಿಂದಾಗಿದ್ದರೆ, ದೀಕ್ಷಾಕಾಲ (ಇದ್ದ) ಮುಗಿಯುವುದಕ್ಕೆ ಮೊದಲು ಪತ್ನಿಯನ್ನು ಮರಳಿ ಸ್ವೀಕರಿಸುವ ಪೂರ್ಣ ಹಕ್ಕು ಗಂಡನಿಗಿದೆ. ಅದನ್ನು ತಡೆಯುವ ಹಕ್ಕು ಹೆಂಡತಿಯ ಕಡೆಯವರಿಗಿಲ್ಲ.
[1] ಗಂಡನಿಗೆ ಹೆಂಡತಿಯನ್ನು ಮರಳಿ ಸ್ವೀಕರಿಸಬಹುದಾದ ವಿಚ್ಛೇದನೆಯು ಎರಡು ಬಾರಿ ಮಾತ್ರ. ಮೊದಲ ಬಾರಿ ವಿಚ್ಛೇದಿಸಿದರೆ ಮರಳಿ ಸ್ವೀಕರಿಸಬಹುದು ಮತ್ತು ಎರಡನೇ ಬಾರಿ ವಿಚ್ಛೇದಿಸಿದರೂ ಮರಳಿ ಸ್ವೀಕರಿಸಬಹುದು. ಆದರೆ ಮೂರನೇ ಬಾರಿ ವಿಚ್ಛೇದಿಸಿದರೆ (ಮೂರನೇ ತಲಾಕ್ ಹೇಳಿದರೆ) ನಂತರ ಹೆಂಡತಿಯನ್ನು ಮರಳಿ ಸ್ವೀಕರಿಸುವ ಅನುಮತಿಯಿಲ್ಲ. ಇಸ್ಲಾಮೀ ಪೂರ್ವ ಕಾಲದಲ್ಲಿ ವಿಚ್ಛೇದನೆಗೆ ಮತ್ತು ಮರಳಿ ಸ್ವೀಕರಿಸುವುದಕ್ಕೆ ಯಾವುದೇ ಮಿತಿಯಿರಲಿಲ್ಲ. ಎಷ್ಟು ಬಾರಿ ಬೇಕಾದರೂ ವಿಚ್ಛೇದನೆ ನೀಡಬಹುದಿತ್ತು ಮತ್ತು ಎಷ್ಟು ಬಾರಿ ಬೇಕಾದರೂ ಮರಳಿ ಪಡೆಯಬಹುದಿತ್ತು. ಇದರಿಂದ ಮಹಿಳೆಯರಿಗೆ ತುಂಬಾ ಅನ್ಯಾಯವಾಗುತ್ತಿತ್ತು. ಏಕೆಂದರೆ, ಅತ್ತ ಗಂಡ ಪೂರ್ಣವಾಗಿ ವಿಚ್ಛೇದಿಸುತ್ತಲೂ ಇರಲಿಲ್ಲ ಮತ್ತು ಪತ್ನಿಯಾಗಿಟ್ಟುಕೊಳ್ಳುತ್ತಲೂ ಇರಲಿಲ್ಲ. ಗಂಡನಿಂದ ವಿಚ್ಛೇದನೆ ಸಿಗದೆ ಅವಳಿಗೆ ಬೇರೆ ಮದುವೆಯಾಗಲು ಸಾಧ್ಯವಾಗುತ್ತಿರಲಿಲ್ಲ. ಆಕೆ ಗಂಡನೊಂದಿಗೆ ನರಕಸದ್ರಶ ಜೀವನವನ್ನು ಅನುಭವಿಸಬೇಕಾಗಿ ಬರುತ್ತಿತ್ತು. [2] ಪತ್ನಿ ವಿಚ್ಛೇದನ ಪಡೆಯುವುದನ್ನು ಖುಲಾ ಎಂದು ಕರೆಯಲಾಗುತ್ತದೆ. ಅಂದರೆ ಆಕೆ ಗಂಡನಿಂದ ಬೇರ್ಪಡಲು ಬಯಸಿದರೆ ಗಂಡ ಆಕೆಗೆ ನೀಡಿದ ವಧುದಕ್ಷಿಣೆ (ಮಹರ್)ಯನ್ನು ಹಿಂದಿರುಗಿಸಬೇಕು. ಗಂಡ ಬೇರ್ಪಡಲು ಒಪ್ಪದಿದ್ದರೆ, ನ್ಯಾಯಾಲಯವು ವಿಚ್ಛೇದನ ನೀಡಲು ಗಂಡನಿಗೆ ಆದೇಶಿಸುತ್ತದೆ. ಗಂಡ ವಿಚ್ಛೇದನ ನೀಡದಿದ್ದರೆ ನ್ಯಾಯಾಲಯವು ಮದುವೆಯನ್ನು ಫಸ್ಕ್ (ರದ್ದು) ಮಾಡುತ್ತದೆ.