[1] ಅಲ್ಲಾಹು ಪ್ರವಾದಿ ಮುಹಮ್ಮದರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಂದೇ ರಾತ್ರಿಯಲ್ಲಿ ಮಕ್ಕಾದಿಂದ ಪ್ಯಾಲಸ್ತೀನ್‍ನಲ್ಲಿರುವ ಮಸ್ಜಿದುಲ್ ಅಕ್ಸಾ (ಬೈತುಲ್ ಮುಕದ್ದಿಸ್)ಗೆ, ನಂತರ ಅಲ್ಲಿಂದ ಆಕಾಶಗಳಿಗೆ ಒಯ್ದು, ಬಳಿಕ ಮಕ್ಕಾಗೆ ಮರಳಿಸಿದನು. ಇದೊಂದು ಅಸಾಮಾನ್ಯ ಘಟನೆಯಾಗಿತ್ತು. ಮಸ್ಜಿದುಲ್ ಅಕ್ಸಾದ ವರೆಗಿನ ನಿಶಾಯಾತ್ರೆಯನ್ನು ‘ಇಸ್ರಾ’ ಮತ್ತು ನಂತರ ಜರುಗಿದ ಆಕಾಶಾರೋಹಣವನ್ನು ‘ಮಿಅರಾಜ್’ ಎಂದು ಕರೆಯಲಾಗುತ್ತದೆ.
[1] ಕ್ರಿ.ಪೂ. 600 ರಲ್ಲಿ ಬಾಬಿಲೋನಿಯಾದ ಚಕ್ರವರ್ತಿ ಬುಖ್ತ್ ನಸರ್ (ನೆಬೂಕಡ್‌ನಝರ್) ಜೆರೂಸಲೇಂ ಮೇಲೆ ದಾಳಿ ಮಾಡಿ ಅಸಂಖ್ಯ ಯಹೂದಿಗಳನ್ನು ಕೊಂದು ಅಸಂಖ್ಯ ಜನರನ್ನು ಗುಲಾಮರನ್ನಾಗಿ ಮಾಡಿಕೊಂಡ ಕಡೆಗೆ ಇಲ್ಲಿ ಸೂಚನೆ ನೀಡಲಾಗಿದೆ. ಇದು ಯಹೂದಿಗಳು ಅಲ್ಲಾಹನ ಪ್ರವಾದಿಗಳನ್ನು ಕೊಂದು ತೌರಾತನ್ನು ಬಹಿರಂಗವಾಗಿ ಉಲ್ಲಂಘಿಸಿ ವಿಕೃತಿ ಮೆರೆದ ಸಂದರ್ಭದಲ್ಲಾಗಿತ್ತು. ಬುಖ್ತ್ ನಸರ್ ಮಾತ್ರವಲ್ಲದೆ, ಜಾಲೂತ್ (ಗೋಲಿಯತ್) ನ ಕೈಯಲ್ಲೂ ಕೂಡ ಯಹೂದಿಗಳು ಬಗೆ ಬಗೆಯ ಹಿಂಸೆಗಳನ್ನು ಅನುಭವಿಸಿದ್ದರು. ನಂತರ ತಾಲೂತ್ (ಸೌಲ್) ರ ಕಾಲದಲ್ಲಿ ಪ್ರವಾದಿ ದಾವೂದ್ (ಅವರ ಮೇಲೆ ಶಾಂತಿಯಿರಲಿ) ಜಾಲೂತನನ್ನು ಜೆರೂಸಲೇಂ ಅನ್ನು ವಶಪಡಿಸಿದರು.
[1] ಯಹೂದಿಗಳು ಪ್ರವಾದಿ ಝಕರಿಯ್ಯಾರನ್ನು (ಅವರ ಮೇಲೆ ಶಾಂತಿಯಿರಲಿ) ಕೊಂದು ನಂತರ ಈಸಾರನ್ನು (ಯೇಸು — ಅವರ ಮೇಲೆ ಶಾಂತಿಯಿರಲಿ) ಕೂಡ ಕೊಲ್ಲಲು ಸಂಚು ನಡೆಸಿದರು. ಆದರೆ ಅಲ್ಲಾಹು ಅವರ ಕೈಯಿಂದ ಈಸಾರನ್ನು (ಅವರ ಮೇಲೆ ಶಾಂತಿಯಿರಲಿ) ರಕ್ಷಿಸಿದನು. ನಂತರ ಕ್ರಿ. ಶ. 70ರಲ್ಲಿ ಅಲ್ಲಾಹು ರೋಮನ್ ದೊರೆ ಟೈಟಸ್‌ನನ್ನು ಅವರ ವಿರುದ್ಧ ಕಳುಹಿಸಿದನು. ಅವನು ಜೆರೂಸಲೇಂಗೆ ದಾಳಿ ಮಾಡಿ ಯಹೂದಿಗಳ ಒಂದು ದೊಡ್ಡ ಸಂಖ್ಯೆಯನ್ನು ಕೊಂದು ಒಂದು ದೊಡ್ಡ ಸಂಖ್ಯೆಯನ್ನು ಖೈದಿಗಳಾಗಿ ಮಾಡಿದನು. ಅವರ ಆಸ್ತಿಗಳೆಲ್ಲವನ್ನೂ ಕೊಳ್ಳೆ ಹೊಡೆದನು. ಅವರ ಧಾರ್ಮಿಕ ಗ್ರಂಥಗಳನ್ನೆಲ್ಲಾ ಚಿಂದಿ ಮಾಡಿ ಬೈತುಲ್ ಮುಕದ್ದಸ್ ಮತ್ತು ಹೈಕಲ್ ಸುಲೈಮಾನ್ ಗಳನ್ನು ಬಲವಂತವಾಗಿ ವಶಪಡಿಸಿದನು. ಯಹೂದಿಗಳನ್ನು ಶಾಶ್ವತವಾಗಿ ಪ್ಯಾಲಸ್ತೀನ್‌ನಿಂದ ಗಡೀಪಾರು ಮಾಡಿದನು.