[1] ಇಸ್ಲಾಮ್ ಮದ್ಯಪಾನವನ್ನು ಹಂತ ಹಂತವಾಗಿ ನಿಷೇಧಿಸಿತು. ಮದ್ಯಪಾನವನ್ನು ಸಂಪೂರ್ಣವಾಗಿ ನಿಷೇಧಿಸುವುದಕ್ಕೆ ಮೊದಲು ಅದರ ಹಾನಿಗಳ ಬಗ್ಗೆ ಎಚ್ಚರಿಸಲಾಯಿತು. ಪಾನಮತ್ತರಾದ ಸ್ಥಿತಿಯಲ್ಲಿ ನಮಾಝ್ ಮಾಡುವುದನ್ನು ವಿರೋಧಿಸಲಾಯಿತು. ಇನ್ನಾದರೂ ನೀವು ಅದನ್ನು ನಿಲ್ಲಿಸುವಿರಾ ಎಂಬ ವಚನದ (91) ಮೂಲಕ ಸಂಪೂರ್ಣ ಪಾನನಿಷೇಧ ಜಾರಿಗೆ ಬಂತು. ಪಾನನಿಷೇಧ ಸಂಪೂರ್ಣ ಜಾರಿಯಾಗುವ ಮೊದಲು ಮದ್ಯಪಾನ ಮಾಡಿದವರಿಗೆ ಶಿಕ್ಷೆಯಿಲ್ಲ ಎಂದು ಈ ವಚನವು ಸ್ಪಷ್ಟಪಡಿಸುತ್ತದೆ.
[1] ಇಹ್ರಾಮ್ನಲ್ಲಿರುವಾಗ ಉದ್ದೇಶಪೂರ್ವಕ ಬೇಟೆಯಾಡಿದರೆ, ಅದಕ್ಕೆ ನೀಡಬೇಕಾದ ಪರಿಹಾರವೇನೆಂದರೆ, ಕೊಂದ ಪ್ರಾಣಿಗೆ ಸಮಾನವೆಂದು ಇಬ್ಬರು ನ್ಯಾಯಸಮ್ಮತ ವ್ಯಕ್ತಿಗಳು ತೀರ್ಪು ನೀಡುವ ಜಾನುವಾರನ್ನು (ಕುರಿ, ಹಸು, ಒಂಟೆ) ಬಲಿ ನೀಡಿ ಹರಮ್‌ನಲ್ಲಿರುವ ಬಡವರಿಗೆ ಹಂಚುವುದು. ಸಮಾನವಾದ ಜಾನುವಾರು ಸಿಗದಿದ್ದರೆ, ಆ ಜಾನುವಾರಿನ ಮೌಲ್ಯದ ಆಹಾರವನ್ನು ಒಬ್ಬ ಬಡವನಿಗೆ ಅರ್ಧ ಸಾಅ್ ಎಂಬಂತೆ ದಾನ ಮಾಡುವುದು. ಅಥವಾ ಪ್ರತಿ ಅರ್ಧ ಸಾಅ್‌ಗೆ ಒಂದು ಉಪವಾಸ ಎಂಬಂತೆ ಉಪವಾಸ ಆಚರಿಸುವುದು.