[1] ಮದೀನದ ಆಸುಪಾಸಿನಲ್ಲಿ ಮೂರು ಯಹೂದಿ ಗೋತ್ರಗಳು ವಾಸವಾಗಿದ್ದವು. ಬನೂ ನದೀರ್, ಬನೂ ಕುರೈಝ ಮತ್ತು ಬನೂ ಕೈನುಕಾ. ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಮದೀನಕ್ಕೆ ಬಂದಾಗ ಇವರೊಡನೆ ಶಾಂತಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಅವಕಾಶ ದೊರೆತಾಗಲೆಲ್ಲಾ ಇವರು ರಹಸ್ಯ ಮಾತುಕತೆ ನಡೆಸಿ ಮುಸ್ಲಿಮರ ವಿರುದ್ಧ ವೈರಿಗಳೊಡನೆ ಕೈ ಜೋಡಿಸುತ್ತಿದ್ದರು. ಒಮ್ಮೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬನೂ ನದೀರ್ ಗೋತ್ರದವರ ಬಳಿಗೆ ಹೋದಾಗ ಅವರು ಒಂದು ದೊಡ್ಡ ಕಲ್ಲನ್ನು ಉರುಳಿಸಿ ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಕೊಲೆ ಮಾಡುವ ಸಂಚು ನಡೆಸಿದ್ದರು. ದಿವ್ಯವಾಣಿಯ ಮೂಲಕ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇದರ ಬಗ್ಗೆ ತಿಳಿದು ಮದೀನಕ್ಕೆ ಮರಳಿದರು. ಒಪ್ಪಂದವನ್ನು ಮುರಿದ ಕಾರಣ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರ ಮೇಲೆ ದಾಳಿ ಮಾಡಿದರು. ಅವರು ತಮ್ಮ ಕೋಟೆಗಳಲ್ಲಿ ಆಶ್ರಯಪಡೆದರು. ಹಲವು ದಿನಗಳ ಕಾಲ ಕೋಟೆಯೊಳಗಿದ್ದು ನಂತರ ಗತ್ಯಂತರವಿಲ್ಲದೆ ಅವರು ಶರಣಾಗಿ ಪ್ರಾಣವನ್ನು ಉಳಿಸಿಕೊಳ್ಳಲು ಮದೀನದಿಂದ ಹೊರಹೋಗುತ್ತೇವೆಂದರು. ಇದನ್ನು ಪ್ರಥಮ ಗಡೀಪಾರು ಎಂದು ಕರೆಯಲಾಗುತ್ತದೆ. ಅವರು ಮದೀನದಿಂದ ಹೊರಹೋಗಿ ಖೈಬರ್‌ನಲ್ಲಿ ಆಶ್ರಯಪಡೆದರು. ಎರಡನೇ ಖಲೀಫ ಉಮರ್ (ಅಲ್ಲಾಹು ಅವರ ಬಗ್ಗೆ ಸಂಪ್ರೀತನಾಗಲಿ) ತಮ್ಮ ಆಡಳಿತಕಾಲದಲ್ಲಿ ಇವರು ಅಲ್ಲಿಂದ ಶಾಮ್ (ಸಿರಿಯಾ ಜೋರ್ಡಾನ್ ಪ್ರದೇಶ)ಗೆ ಗಡೀಪಾರ ಮಾಡಿದರು.
[1] ಬನೂ ನದೀರ್ ವಾಸವಾಗಿದ್ದ ಸ್ಥಳವು ಮದೀನದಿಂದ ಕೇವಲ ಮೂರು ಅಥವಾ ನಾಲ್ಕು ಮೈಲು ದೂರದಲ್ಲಿತ್ತು. ಆದ್ದರಿಂದ ಅದನ್ನು ವಶಪಡಿಸಲು ಮುಸ್ಲಿಮರಿಗೆ ದೀರ್ಘ ಯಾತ್ರೆ ಮಾಡುವ ಅಗತ್ಯ ಬರಲಿಲ್ಲ. ಅಥವಾ ಅದನ್ನು ವಶಪಡಿಸಲು ಮುಸ್ಲಿಮರಿಗೆ ಒಂಟೆ ಅಥವಾ ಕುದುರೆಗಳನ್ನು ಓಡಿಸಬೇಕಾಗಿ ಬರಲಿಲ್ಲ. ಮಾತ್ರವಲ್ಲದೆ, ಅದನ್ನು ಒಪ್ಪಂದದ ಮೂಲಕ ವಶಪಡಿಸಲಾಯಿತು. ಯುದ್ಧವಿಲ್ಲದೆ ವಶವಾಗುವ ಸಂಪತ್ತನ್ನು ಫೈಅ್ ಎಂದು ಕರೆಯಲಾಗುತ್ತದೆ. ಯುದ್ಧದಿಂದ ವಶವಾಗುವ ಸಂಪತ್ತನ್ನು ಗನೀಮತ್ (ಸಮರಾರ್ಜಿತ ಸೊತ್ತು) ಎಂದು ಕರೆಯಲಾಗುತ್ತದೆ.
[1] ಮುಹಾಜಿರ್‌ಗಳೆಂದರೆ ಮಕ್ಕಾದಿಂದ ಮದೀನಕ್ಕೆ ವಲಸೆ ಬಂದವರು. ಅವರಿಗೆ ಸಂರಕ್ಷಣೆ ನೀಡಿ ಸಹಾಯ ಮಾಡಿದ ಮದೀನ ನಿವಾಸಿಗಳಾದ ಮುಸ್ಲಿಮರನ್ನು ಅನ್ಸಾರ್ ಎಂದು ಕರೆಯಲಾಗುತ್ತದೆ.
[1] ಅಂದರೆ ಬದ್ರ್ ಯುದ್ಧದಲ್ಲಿ ಸೋತು ಸುಣ್ಣವಾಗಿ ಹೋದ ಕುರೈಶರು, ಅಥವಾ ಯಹೂದಿಗಳ ಇನ್ನೊಂದು ಗೋತ್ರವಾದ ಬನೂ ಕೈನುಕಾದವರು.