ರಾತ್ರಿ-ಹಗಲುಗಳ ಬದಲಾವಣೆಯಲ್ಲಿ, ಅಲ್ಲಾಹು ಆಕಾಶದಿಂದ ಆಹಾರವನ್ನು (ಮಳೆಯನ್ನು) ಇಳಿಸಿ ತನ್ಮೂಲಕ ಭೂಮಿಗೆ ಅದು ನಿರ್ಜೀವವಾದ ಬಳಿಕ ಜೀವ ನೀಡುವುದರಲ್ಲಿ ಮತ್ತು ಗಾಳಿಯ ನಿಯಂತ್ರಣದಲ್ಲಿ ಆಲೋಚಿಸುವ ಜನರಿಗೆ ಅನೇಕ ದೃಷ್ಟಾಂತಗಳಿವೆ.
ತನಗೆ ಓದಿಕೊಡಲಾಗುವ ಅಲ್ಲಾಹನ ವಚನಗಳಿಗೆ ಅವನು ಕಿವಿಗೊಡುತ್ತಾನೆ. ನಂತರ ಅದನ್ನು ಕೇಳಿಯೇ ಇಲ್ಲ ಎಂಬಂತೆ ಅಹಂಕಾರದಿಂದ ಹಟತೊಟ್ಟು ನಿಲ್ಲುತ್ತಾನೆ. ಅವನಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ತಿಳಿಸಿರಿ.
ನರಕಾಗ್ನಿ ಅವರ ಮುಂಭಾಗದಲ್ಲೇ ಇದೆ! ಅವರು ಏನು ಸಂಪಾದಿಸಿದರೋ ಮತ್ತು ಅವರು ಅಲ್ಲಾಹನನ್ನು ಬಿಟ್ಟು ಯಾರನ್ನು ರಕ್ಷಕರನ್ನಾಗಿ ಸ್ವೀಕರಿಸಿದರೋ ಯಾವುದೂ ಅವರಿಗೆ ಪ್ರಯೋಜನ ನೀಡುವುದಿಲ್ಲ. ಅವರಿಗೆ ಕಠೋರ ಶಿಕ್ಷೆಯಿದೆ.
ಅಲ್ಲಾಹನೇ ನಿಮಗೆ ಸಮುದ್ರವನ್ನು ಅಧೀನಗೊಳಿಸಿದವನು. ಅವನ ಅಪ್ಪಣೆಯಂತೆ ನಾವೆಗಳು ಅದರಲ್ಲಿ ಸಂಚರಿಸುವುದಕ್ಕಾಗಿ, ನೀವು ಅವನ ಔದಾರ್ಯದಿಂದ ಬೇಡಿಕೊಳ್ಳುವುದಕ್ಕಾಗಿ ಮತ್ತು ನೀವು ಕೃತಜ್ಞರಾಗುವುದಕ್ಕಾಗಿ.