ಅವರು ನಿಮ್ಮೊಡನೆ ಒಳಿತಿಗಿಂತ ಮೊದಲು ಕೆಡುಕನ್ನು (ಶಿಕ್ಷೆಯನ್ನು) ತರಲು ತ್ವರೆ ಮಾಡುತ್ತಾರೆ. ಮಾದರೀಯೋಗ್ಯ ಶಿಕ್ಷೆಗಳು ಅವರಿಗಿಂತ ಮೊದಲಿನ ತಲೆಮಾರುಗಳಿಗೆ ಈಗಾಗಲೇ ಸಂಭವಿಸಿಬಿಟ್ಟಿದೆ. ನಿಶ್ಚಯವಾಗಿಯೂ, ಜನರು ಅಕ್ರಮಿಗಳಾಗಿದ್ದೂ ಸಹ ನಿಮ್ಮ ಪರಿಪಾಲಕನು (ಅಲ್ಲಾಹು) ಅವರನ್ನು ಕ್ಷಮಿಸುವವನಾಗಿದ್ದಾನೆ. ನಿಶ್ಚಯವಾಗಿಯೂ, ನಿಮ್ಮ ಪರಿಪಾಲಕನು (ಅಲ್ಲಾಹು) ಅತಿಕಠೋರವಾಗಿ ಶಿಕ್ಷಿಸುವವನೂ ಆಗಿದ್ದಾನೆ.
ಸತ್ಯನಿಷೇಧಿಗಳು ಕೇಳುತ್ತಾರೆ: “ಇವನಿಗೆ ಇವನ ಪರಿಪಾಲಕನಿಂದ (ಅಲ್ಲಾಹನಿಂದ) ಒಂದು ದೃಷ್ಟಾಂತವೇಕೆ ಇಳಿಸಲಾಗಿಲ್ಲ?” ನೀವು ಮುನ್ನೆಚ್ಚರಿಕೆ ನೀಡುವವರು ಮಾತ್ರ. ಎಲ್ಲಾ ಜನರಿಗೂ ಒಬ್ಬ ಮಾರ್ಗದರ್ಶಕನಿದ್ದಾನೆ.
ತಾಯಿ ತನ್ನ ಉದರದಲ್ಲಿ ಏನು ಹೊತ್ತಿದ್ದಾಳೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. ಗರ್ಭಾಶಯಗಳು ತಗ್ಗುವುದನ್ನು ಮತ್ತು ಉಬ್ಬುವುದನ್ನು ಅವನು ತಿಳಿಯುತ್ತಾನೆ. ಎಲ್ಲವೂ ಅವನ ಬಳಿ ಒಂದು ನಿರ್ಣಯದಂತೆ ಇವೆ.
ನಿಮ್ಮಲ್ಲಿ ಮಾತನ್ನು ರಹಸ್ಯವಾಗಿ ಹೇಳುವವನು ಮತ್ತು ಅದನ್ನು ಬಹಿರಂಗವಾಗಿ ಹೇಳುವವನು, ರಾತ್ರಿಯಲ್ಲಿ ಅಡಗಿಕೊಳ್ಳುವವನು ಮತ್ತು ಹಗಲಲ್ಲಿ ನಡೆದಾಡುವವನು—ಎಲ್ಲರೂ ಅಲ್ಲಾಹನಿಗೆ ಸಂಬಂಧಿಸಿದಂತೆ ಸಮಾನರಾಗಿದ್ದಾರೆ.
ಮನುಷ್ಯನ ಮುಂಭಾಗದಲ್ಲಿ ಮತ್ತು ಹಿಂಭಾಗದಲ್ಲಿ ಅವನ ಪಹರೆಗಾರರಿದ್ದಾರೆ.[1] ಅಲ್ಲಾಹನ ಆಜ್ಞೆಯಂತೆ ಅವರು ಅವನನ್ನು ಕಾಯುತ್ತಾರೆ. ಜನರು ಸ್ವಯಂ ತಮ್ಮಲ್ಲಿ ಬದಲಾವಣೆ ತರುವ ತನಕ ಅಲ್ಲಾಹು ಅವರ ಸ್ಥಿತಿಯನ್ನು ಖಂಡಿತ ಬದಲಾಯಿಸುವುದಿಲ್ಲ. ಯಾವುದಾದರೂ ಜನರನ್ನು ಶಿಕ್ಷಿಸಬೇಕೆಂದು ಅಲ್ಲಾಹು ಬಯಸಿದರೆ ಅದನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ಅವನ ಹೊರತು ಅವರಿಗೆ ಬೇರೆ ರಕ್ಷಕರೂ ಇಲ್ಲ.
ಸಿಡಿಲು ಅವನನ್ನು ಸ್ತುತಿಸುತ್ತಾ ಅವನ ಪರಿಶುದ್ಧತೆಯನ್ನು ಕೊಂಡಾಡುತ್ತದೆ ಮತ್ತು ದೇವದೂತರುಗಳು ಕೂಡ ಅವನ ಭಯದಿಂದ (ಅವನನ್ನು ಸ್ತುತಿಸುತ್ತಾರೆ). ಅವನು ಸಿಡಿಲುಗಳನ್ನು ಕಳುಹಿಸಿ, ಅವನು ಇಚ್ಛಿಸುವವರಿಗೆ ಅದು ಬಡಿಯುವಂತೆ ಮಾಡುತ್ತಾನೆ. ಸತ್ಯನಿಷೇಧಿಗಳು ಅಲ್ಲಾಹನ ವಿಷಯದಲ್ಲಿ ತರ್ಕಿಸುತ್ತಾರೆ. ಆದರೆ ಅಲ್ಲಾಹು ಮಹಾ ಶಕ್ತಿಶಾಲಿಯಾಗಿದ್ದಾನೆ.