ನಾವು ಆಕಾಶಗಳನ್ನು, ಭೂಮಿಯನ್ನೂ ಮತ್ತು ಅವುಗಳ ನಡುವೆಯಿರುವ ಸಕಲ ವಸ್ತುಗಳನ್ನು ಉದ್ದೇಶಪೂರ್ವಕವಾಗಿಯೇ ಒಂದು ನಿರ್ದಿಷ್ಟ ಅವಧಿಗಾಗಿ ಸೃಷ್ಟಿಸಿದ್ದೇವೆ, ಆದರೆ ಸತ್ಯನಿಷೇಧಿಗಳು ತಮಗೆ ಎಚ್ಚರಿಕೆ ನೀಡಲಾಗುತ್ತಿರುವುದರಿಂದ ವಿಮುಖರಾಗುತ್ತಾರೆ.
ಓ ಪೈಗಂಬರರೇ ಹೇಳಿರಿ; ನೀವು ಅಲ್ಲಾಹನನ್ನು ಬಿಟ್ಟು ಕರೆದು ಬೇಡುತ್ತಿರುವವರ ಕುರಿತು ಯೋಚಿಸಿದ್ದೀರಾ. ಅವರು ಭೂಮಿಯಲ್ಲಿ ಏನನ್ನು ಸೃಷ್ಟಿಸಿದ್ದಾರೆ ? ಅಥವ ಅವರಿಗೆ ಆಕಾಶಗಳ ಸೃಷ್ಟಿಯಲ್ಲಿ ಯಾವ ಪಾಲುದಾರಿಕೆಯಿದೆ ಎಂಬುದನ್ನು ನನಗೆ ತೋರಿಸಿಕೊಡಿರಿ ? ನೀವು ಸತ್ಯವಂತರಾಗಿದ್ದರೆ ಇದಕ್ಕೆ ಮುಂಚಿನ ಯಾವುದಾದರೂ ಗ್ರಂಥವನ್ನು ಅಥವ ಜ್ಞಾನದ ಯಾವುದಾದರೂ ಪಳಿಯುಳಿಕೆಗಳು ನಿಮ್ಮ ಬಳಿಯಲ್ಲಿದ್ದರೆ ಅದನ್ನೇ ತನ್ನಿರಿ.
ಅಲ್ಲಾಹನನ್ನು ಬಿಟ್ಟು ತನ್ನ ಪ್ರಾರ್ಥನೆಗೆ ಪ್ರಳಯದಿನದವರೆಗೂ ಓಗೊಡಲಾರದಂತಹವರನ್ನು ಕರೆದು ಬೇಡುವವನಿಗಿಂತ ಹೆಚ್ಚು ದಾರಿಗೆಟ್ಟವನು ಇನ್ನಾರಿದ್ದಾನೆ, ಮಾತ್ರವಲ್ಲ ಅವರಂತು ಇವರ ಮೊರೆಯ ಬಗ್ಗೆ ಏನೂ ಅರಿವಿಲ್ಲದವರಾಗಿದ್ದಾರೆ.