[1] ಮಕ್ಕಾದಲ್ಲಿ ಇಸ್ಲಾಂ ಸ್ವೀಕರಿಸಿದವರು ಮದೀನಕ್ಕೆ ಹಿಜ್ರ (ವಲಸೆ) ಮಾಡಬೇಕೆಂಬ ಆಜ್ಞೆಯು ಪ್ರಬಲವಾಗಿದ್ದ ಕಾಲದಲ್ಲಿ ಮಕ್ಕಾದಲ್ಲಿ ಕೆಲವರು ಇಸ್ಲಾಂ ಸ್ವೀಕರಿಸಿದರು. ಆದರೆ ಅವರ ಪತ್ನಿಯರು ಮತ್ತು ಮಕ್ಕಳು ಅವರನ್ನು ಮದೀನಕ್ಕೆ ವಲಸೆ ಹೋಗದಂತೆ ತಡೆದರು. ನಂತರ ಕೆಲವು ವರ್ಷಗಳ ಬಳಿಕ ಅವರು ಮದೀನಕ್ಕೆ ಬಂದಾಗ ಅಲ್ಲಿ ಇತರ ಮುಸಲ್ಮಾನರು ಬಹಳಷ್ಟು ಧಾರ್ಮಿಕ ವಿಚಾರಗಳನ್ನು ಕಲಿತುಕೊಂಡು ಅಪಾರ ಪುಣ್ಯ ಸಂಪಾದಿಸಿದ್ದನ್ನು ಕಂಡು ಇವರಿಗೆ ಮರುಕವಾಯಿತು. ತಮ್ಮನ್ನು ಮದೀನಕ್ಕೆ ಹಿಜ್ರ ಮಾಡದಂತೆ ತಡೆದ ಪತ್ನಿಯರು ಮತ್ತು ಮಕ್ಕಳನ್ನು ಶಿಕ್ಷಿಸಲು ಅವರು ಮುಂದಾದರು. ಆಗ ಅಲ್ಲಾಹು ಈ ವಚನವನ್ನು ಅವತೀರ್ಣಗೊಳಿಸಿದನು. ಅವರು ಮಾಡಿದ ತಪ್ಪನ್ನು ಕ್ಷಮಿಸಲು ಮತ್ತು ನಿರ್ಲಕ್ಷಿಸಲು ಅಲ್ಲಾಹು ಆಜ್ಞಾಪಿಸಿದನು.